ದೇಶ

ಜಮ್ಮು-ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ: ರಾಜ್ಯಸಭೆಯಲ್ಲಿ ಅಮಿತ್ ಶಾ

Manjula VN

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿರುವ ಕ್ರಮವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಸಮರ್ಥಿಸಿಕೊಂಡಿದ್ದು, ಕಾಶ್ಮೀರ ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಿದ್ದಾರೆ. 

ಕಾಶ್ಮೀರದ ಸ್ಥಿತಿಗತಿ ವರದಿ ಮಂಡಿಸಿದ ಅಮಿತ್ ಶಾ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಈ ವನಿಚಾರದಲ್ಲಿ ಮುಂದಿನ ನಿರ್ಧಾರವನ್ನು ಸ್ಥಳೀಯಾಡಳಿತವೇ ಪರಾಮರ್ಶಿಸಲಿದೆ ಎಂದು ಹೇಳಿದ್ದಾರೆ. 

ಕಾಶ್ಮೀರದಲ್ಲಿ ಪಾಕಿಸ್ತಾನ ಚಟುವಟಿಕೆಗಳೂ ಕೂಡ ನಡೆಯುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಸ್ಥಳೀಯ ಆಡಳಿತ ಮಂಡಳಿ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಕಾಶ್ಮೀರ ಇದೀಗ ಸಹಜ ಸ್ಥಿತಿಗೆ ಮರಳಿದೆ. ದಿನಪತ್ರಿಕೆ, ಟಿವಿ ಹಾಗೂ ಬ್ಯಾಂಕ್ ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಉರ್ದು ಹಾಗೂ ಇಂಗ್ಲೀಷ್ ಪತ್ರಿಕೆಗಳು, ಟಿವಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಕಚೇರಿಗಳು, ನ್ಯಾಯಾಲಯಗಳು, ಚುನಾವಣಾ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. 

ಇದೀಗ ನಾನು ಪ್ರಸ್ತುತ ಪಡಿಸಿರುವ ವಿಚಾರಗಳಿಗೆ ಗುಲಾಂ ನಬಿ ಆಜಾದ್ ಅವರು ಸವಾಲು ಎಸೆಯಲಿ. ಈ ದಾಖಲೆಗಳಿಗೇಕೆ ನೀವು ವಿರೋಧ ವ್ಯಕ್ತಪಡಿಸುತ್ತಿಲ್ಲ? ಈ ವಿಚಾರ ಸಂಬಂಧ ಗಂಟೆಗಟ್ಟಲೆ ಚರ್ಚೆ ನಡೆಸಲು ನಾನು ಸಿದ್ದನಿದ್ದೇನೆಂದು ಕಾಂಗ್ರೆಸ್'ಗೆ ಸವಾಲು ಹಾಕಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ವೈದ್ಯಕೀಯ ಔಷಧಿಗಳು, ಎಲ್'ಪಿಸಿ ಹಾಗೂ ಅಕ್ಕಿ ಬಹಳಷ್ಟಿವೆ. ಕಾಶ್ಮೀರದಲ್ಲಿ 22 ಲಕ್ಷ ಮೆಟ್ರಿಕ್ ಸೇಬುಗಳು ಬೆಳೆಯುವ ನಿರೀಕ್ಷೆಗಳಿವೆ. ಎಲ್ಲಾ ಲ್ಯಾಂಡ್'ಲೈನ್ ಗಳು ಕಾರ್ಯನಿರ್ವಹಿಸುತ್ತಿವೆ. ಕಾಶ್ಮೀರದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಆರೋಗ್ಯ ಸೇವೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. 370ನೇ ವಿಧಿ ರದ್ದು ಬಳಿಕ ಪೊಲೀಸರು ಗುಂಡುಗಳನ್ನು ಹಾಕಿರುವ ಪ್ರಕರಣಗಳು ವರದಿಗಳಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. 

SCROLL FOR NEXT