ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಅಸ್ಥಿರತೆ ಎದುರಾಗಿದ್ದು, ಆಮಿಷದ ಭೀತಿಯಿಂದಾಗಿ ಎನ್'ಸಿಪಿ ತನ್ನ ಪಕ್ಷದ ಎಲ್ಲಾ ಶಾಸಕರನ್ನೂ ಹೋಟೆಲ್ ಗಳಿಗೆ ಸ್ಥಳಾಂತರ ಮಾಡುತ್ತಿದೆ ಎಂದು ವರದಿಗಳು ತಿಳಿಸಿವೆ.
ಮಹಾರಾಷ್ಟ್ರ ರಾಜಕೀಯ ಪರಿಸ್ಥಿತಿ ಕುರಿತಂತೆ ಸುಪ್ರೀಂಕೋರ್ಟ್ ಇಂದೇ ತೀರ್ಪು ಪ್ರಕಟಿಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದ್ದು, ನಾಳೆ ತೀರ್ಪು ಪ್ರಕಟಗೊಳ್ಳಲಿದೆ.
ಹೀಗಾಗಿ ಆಮಿಷದ ಭೀತಿಯಿಂದ ಎನ್'ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆ ಪಕ್ಷಗಳು ತಮ್ಮ ಶಾಸಕರನ್ನು ಸ್ಥಳಾಂತರ ಮಾಡುವತ್ತ ಕಾರ್ಯನಿರತವಾಗಿವೆ.
ರಿನಾಯ್ಸ್'ಸನ್ಸ್ ಹೋಟೆಲ್'ನಲ್ಲಿ ತಂಗಿದ್ದ ಎನ್'ಸಿಪಿ ಶಾಸಕರನ್ನು ಇದೀಗ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್'ನ ಸಂತಕ್ರೂಜ್ ಮತ್ತು ಸೋಫಿಟೆಲ್'ನ ಹೋಟೆಲ್ ಗ್ರ್ಯಾಂಡ್ ಹ್ಯಾತ್'ಗೆ ಸ್ಥಳಾಂತರಿಸಲಾಗಿದೆ. ಇದೇ ವೇಳೆ ಬಿಜೆಪಿ ನಾಯಕ ರವೀಂದ್ರ ಚವಣ್ ಅವರು, ಹೋಟೆಲ್ ರಿನಾಯ್ಸ್'ಸನ್ಸ್'ಗೆ ಬಂದಿದ್ದು, ಎಲ್ಲರ ಕುತೂಹಲವನ್ನು ಕೆರಳಿಸಿದೆ.
ಇನ್ನು ಕಾಂಗ್ರೆಸ್ ಪ್ಕಷದ ಶಾಸಕರು ಈ ಹಿಂದೆ ಇದ್ದ ಅಂಧೇರಿಯ ಜೆಡಬ್ಲ್ಯೂ ಮಾರಿಯೆಟ್ ಹೋಟೆಲ್ ನಲ್ಲಿಯೇ ತಂಗಿದ್ದಾರೆ.
ಶಿವಸೇನೆ ಶಾಸಕರು ಅಂಧೇರಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಲಲಿತ್ ಹೋಟೆಲ್ ನಲ್ಲಿ ತಂಗಿದ್ದಾರೆ. ಶೀಘ್ರದಲ್ಲಿಯೇ ಇವರನ್ನೂ ಬೇರೆ ಹೋಟೆಲ್'ಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.