ದೇಶ

ಮತ್ತೆ ಎನ್ ಸಿಪಿ ತೆಕ್ಕೆಗೆ ಮರಳಿದ ಅಜಿತ್ ಪವಾರ್ ಗೆ ಡಿಸಿಎಂ ಹುದ್ದೆಯ ಬಹುಮಾನ?

Lingaraj Badiger

ಮುಂಬೈ: ಮಹಾರಾಷ್ಟ್ರದಲ್ಲಿ ಸುಮಾರು ಒಂದು ತಿಂಗಳ ನಂತರ ನೂತನ ಸರ್ಕಾರ ರಚನೆಯ ಬಿಕ್ಕಟ್ಟಿಗೆ ತೆರೆ ಬಿದ್ದಿದ್ದು, ಶಿವಸೇನಾ, ಎನ್ ಸಿಪಿ ಹಾಗೂ ಕಾಂಗ್ರೆಸ್ ಒಳಗೊಂಡ ಮಹಾ ವಿಕಾಸ ಅಘಾದಿ ಮೈತ್ರಿಕೂಟ ಸರ್ಕಾರ ರಚಿಸಲು ಭರ್ಜರಿ ಸಿದ್ಧತೆ ನಡೆಸಿದೆ.

ಈ ಮಧ್ಯೆ, ಪಕ್ಷದ ವಿರುದ್ಧ ಬಂಡಾಯವೆದ್ದು ಬಿಜೆಪಿ ಜತೆ ಸೇರಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಎನ್ ಸಿಪಿ ಮುಖಂಡ ಅಜತ್ ಪವಾರ್ ಅವರು ಮತ್ತೆ ಪಕ್ಷಕ್ಕೆ ಮರಳಿದ್ದು, ಅವರನ್ನು ಮತ್ತೆ ಉಪ ಮುಖ್ಯಮಂತ್ರಿಯಾಗಿ ಮಾಡಲಾಗುತ್ತಿದೆ ಎಂದು ಮಾತುಗಳು ಕೇಳಿಬರುತ್ತಿವೆ.

ಪಕ್ಷದ ಮೂಲಗಳ ಪ್ರಕಾರ, ಉದ್ಧವ್ ಠಾಕ್ರೆ ಅವರು ನಾಳೆ ಮಹಾರಾಷ್ಟ್ರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸದ ಬಳಿಕ ಅಜಿತ್ ಪವಾರ್ ಅವರನ್ನು ಸಭಾನಾಯಕನಾಗಿ ಆಯ್ಕೆ ಮಾಡಿ, ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸದ್ಯ ಎನ್ ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಜಯಂತ್ ಪಾಟೀಲ್ ಅವರು ಉಪ ಮುಖ್ಯಮಂತ್ರಿಯಾಗುವುದಿಲ್ಲ. ಬದಲಾಗಿ ಮತ್ತೆ ಪಕ್ಷಕ್ಕೆ ಮರಳಿದ ಅಜಿತ್ ಪವಾರ್ ಅವರನ್ನು ಎನ್ ಸಿಪಿಯಿಂದ ಉಪ ಮುಖ್ಯಮಂತ್ರಿ ಮಾಡಲಾಗುತ್ತಿದೆ ಎನ್ನಲಾಗಿದೆ.

ದೇವೇಂದ್ರ ಫಡ್ನವಿಸ್ ಜತೆ ಸೇರಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಅಜಿತ್ ಪವಾರ್ ಅವರು ನಿನ್ನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಫಡ್ನಿವಿಸ್ ಸಹ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 

ನಿನ್ನೆ ರಾತ್ರಿ ತಮ್ಮ ಚಿಕ್ಕಪ್ಪ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದ ಅಜಿತ್ ಪವಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.

SCROLL FOR NEXT