ದೇಶ

ಸ್ಥಳೀಯ ಸಂಸ್ಥೆಗಳ ಚುನಾವಣೆ ಎಫೆಕ್ಟ್: ಜಮ್ಮು ರಾಜಕೀಯ ನಾಯಕರ ಬಿಡುಗಡೆ, ಕಾಶ್ಮೀರಿ ನಾಯಕರಿಗಿಲ್ಲ ಬಿಡುಗಡೆ ಭಾಗ್ಯ

Lingaraj Badiger

ಜಮ್ಮು: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಬಂಧನಕ್ಕೊಳಗಾಗಿದ್ದ ಜಮ್ಮುವಿನ ಹಲವು ರಾಜಕೀಯ ನಾಯಕರಿಗೆ ಕೊನೆಗೂ ಎರಡು ತಿಂಗಳ ಬಳಿಕ ಬಿಡುಗಡೆ ಭಾಗ್ಯ ಸಿಕ್ಕಿದೆ. ಆದರೆ ಕಾಶ್ಮೀರದ ರಾಜಕೀಯ ನಾಯಕರ ಗೃಹ ಬಂಧನವನ್ನು ಮುಂದುವರೆಸಲಾಗಿದೆ.

ಸದ್ಯ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮುವಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್‌, ಕಾಂಗ್ರೆಸ್ ಮತ್ತು ಜೆಕೆಎನ್ ಪಿಪಿ ನಾಯಕರನ್ನು ಬಿಡುಗಡೆ ಮಾಡಲಾಗಿದೆ.  ಆದರೆ ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ  ಓಮರ್ ಅಬ್ದುಲ್ಲಾ, ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಜಮ್ಮು-ಕಾಶ್ಮೀರ ಪೀಪಲ್ ಕಾನ್ಫರೆನ್ಸ್‌ನ ಸಜ್ಜದ್ ಘನಿ ಲೋನ್ ಅವರಿಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.

ಜಮ್ಮು ರಾಜಕೀಯ ನಾಯಕರಾದ ದೇವೇಂದ್ರ ಸಿಂಗ್ ರಾಣಾ, ರಮನ್​ ಭಲ್ಲಾ, ಹರ್ಷದೇವ್ ಸಿಂಗ್, ಚೌಧರಿ ಲಾಲ್​ ಸಿಂಗ್, ವಿಕಾರ್​ ರಸೋಲ್​, ಜಾವೇದ್​ ರಾಣಾ, ಸುರ್ಜಿತ್ ಸಿಂಗ್ ಸ್ಲಾಥಿಯಾ ಮತ್ತು ಸಜ್ಜಾದ್​ ಅಹ್ಮದ್ ಕಿಚ್ಲೋ ಅವರು ಇಂದು ಬಿಡುಗಡೆ ಮಾಡಲಾಗಿದೆ.

ಕೇಂದ್ರ ಸರ್ಕಾರ ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಕಣಿವೆ ರಾಜ್ಯದ ಪ್ರತ್ಯೇಕವಾದಿಗಳು ಸೇರಿದಂತೆ ಸುಮಾರು 400 ರಾಜಕೀಯ ನಾಯಕರನ್ನು ಬಂಧಿಸಿ ಗೃಹಬಂಧನದಲ್ಲಿ ಇರಿಸಲಾಗಿತ್ತು.

SCROLL FOR NEXT