ದೇಶ

ಸಾರಿಗೆ ನೌಕರರನ್ನು ವಜಾಗೊಳಿಸಿದ ತೆಲಂಗಾಣ ಸಿಎಂ ಕೆಸಿಆರ್

Shilpa D

ತೆಲಂಗಾಣ: ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ತೊಡಗಿದ್ದ ತೆಲಂಗಾಣ ರಾಜ್ಯ ಸಾರಿಗೆ ನಿಗಮದ ನೌಕರರನ್ನು ವಜಾ ಮಾಡಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್ ಆದೇಶ ಹೊರಡಿಸಿದ್ದಾರೆ. 

ಒಟ್ಟು 26 ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 50 ಸಾವಿರಕ್ಕೂ ಅಧಿಕ ರಾಜ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿ ಶುಕ್ರವಾರ ರಾತ್ರಿಯಿಂದ ಪ್ರತಿಭಟನೆಗೆ ಕುಳಿತಿದ್ದರು. ಶನಿವಾರ ಸಂಜೆ 6 ಗಂಟೆ ಒಳಗಾಗಿ ಪ್ರತಿಭಟನೆ ನಿಲ್ಲಿಸುವಂತೆ ಸರ್ಕಾರ ಆದೇಶಿಸಿತ್ತು. ಆದರೆ, ಈ ಆದೇಶಕ್ಕೆ ತಲೆಬಾಗದ 48 ಸಾವಿರ ನೌಕರರನ್ನು ವಜಾ ಮಾಡಲಾಗಿದೆ.

ಕೆಲಸ ಕಳೆದುಕೊಂಡವರ ಜೊತೆ ಮತ್ತೆ ರಾಜಿ ಮಾತುಕತೆಗೆ ಮುಂದಾಗುವ ಮಾತೇ ಇಲ್ಲ ಎಂದಿರುವ ಕೆ.ಸಿ ರಾವ್​, “ಹಬ್ಬದ ಸಮಯದಲ್ಲಿ ಬಸ್​ ಚಾಲಕರು, ನಿರ್ವಾಹಕರು, ಸಿಬ್ಬಂದಿ ಪ್ರತಿಭಟನೆಗೆ ಕೂತಿರುವುದು ದೊಡ್ಡ ಅಪರಾಧ. ಇದರಿಂದ ಸರ್ಕಾರಕ್ಕೆ 1,200 ಕೋಟಿ ರೂ. ನಷ್ಟ ಉಂಟಾಗಿದೆ. ಸಾಲದ ಮೊತ್ತ 5,000 ಕೋಟಿಗೆ ಏರಿಕೆ ಆಗಿದೆ,” ಎಂದು ವಿಷಾದ ವ್ಯಕ್ತಪಡಿಸಿದರು.

ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು, ಟಿಎಸ್​​ಆರ್​ಟಿಸಿಯನ್ನು ಸರ್ಕಾರದ ಜೊತೆ ವಿಲೀನಗೊಳಿಸಬೇಕು ಎಂಬಿತ್ಯಾದಿ 26 ಬೇಡಿಕೆಗಳನ್ನು ಸಾರಿಗೆ ನಿಗಮದ ಸಿಬ್ಬಂದಿ ಸರ್ಕಾರದ ಮುಂದೆ ಇರಿಸಿದ್ದರು. ಆದರೆ, ಮುಖ್ಯಮಂತ್ರಿ ಕೆಸಿಆರ್​ ಇವರ ಬೇಡಿಕೆಗಳಿಗೆ ಸೊಪ್ಪು ಹಾಕಿರಲಿಲ್ಲ.

ಹಾಲಿ 1,200 ನೌಕರರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೀಘ್ರವೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಅಲ್ಲದೆ, ಯಾವುದೇ ಒಕ್ಕೂಟದ ಜೊತೆ ಇವರು ಸೇರ್ಪಡೆಯಾಗುವುದಿಲ್ಲ ಎನ್ನುವ ಬಗ್ಗೆ ಖಾತ್ರಿ ಕೊಟ್ಟ ನಂತರವೇ ಅವರನ್ನು ಕೆಲಸಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ,” ಎಂದು ಕೆಸಿಆರ್​ ಹೇಳಿದ್ದಾರೆ.

ಹಬ್ಬದ ಸಮಯವಾದ್ದರಿಂದ ಬಸ್​ನಲ್ಲಿ ಜನ ಸಂಚಾರ ಹೆಚ್ಚಿರುತ್ತದೆ. ಹೀಗಾಗಿ ಹೆಚ್ಚುವರಿಯಾಗಿ 2,500 ಬಸ್​ಗಳನ್ನು ತೆಲಂಗಾಣ ಸರ್ಕಾರ ಪಡೆದುಕೊಂಡಿತ್ತು. ಅಲ್ಲದೆ, 4,114 ಖಾಸಗಿ ಬಸ್​ಗಳಿಗೆ ಸರ್ಕಾರದ ಪರವಾನಿಗೆ ಅಡಿಯಲ್ಲಿ ಸಂಚಾರ ಮಾಡಲು ಅವಕಾಶ ನೀಡಿತ್ತು.
 

SCROLL FOR NEXT