ದೇಶ

ನವರಾತ್ರಿ ವಿಶೇಷ: ದಾಖಲೆ ಪ್ರಮಾಣದ ಭಕ್ತರಿಂದ ಮಾತಾ ವೈಷ್ಣೋದೇವಿ ದರ್ಶನ

Srinivasamurthy VN

ಜಮ್ಮು: ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಕಣಿವೆ ರಾಜ್ಯ ಜಮ್ಮುವಿನಲ್ಲಿರುವ ಖ್ಯಾತ ಧಾರ್ಮಿಕ ಕ್ಷೇತ್ರ ವೈಷ್ಣೋದೇವಿ ದೇಗುಲಕ್ಕೆ ಈ ಬಾರಿ ದಾಖಲೆ ಪ್ರಮಾಣದ ಭಕ್ತರು ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಜಮ್ಮು-ಕಾಶ್ಮೀರದ ರೆಯಾಸಿ ಜಿಲ್ಲೆಯ ಕಾಟ್ರಾ ನಗರದ ತ್ರಿಕುಟ ಪರ್ವದಲ್ಲಿರುವ ಮಾತಾ ವೈಷ್ಣೋದೇವಿ ದೇಗುಲದ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ಸೆಪ್ಟಂಬರ್ 29ರಿಂದ ಅಕ್ಟೋಬರ್ 7ರವರೆಗೆ  3ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿರುವುದಾಗಿ ಹೇಳಿದೆ. ಇನ್ನು ನವರಾತ್ರಿ ಉತ್ಸವದಲ್ಲಿ ಖ್ಯಾತ ಬಾಲಿವುಡ್ ಗಾಯಕ ಸೋನು ನಿಗಮ್, ಸೂಫಿ ಗಾಯಕ ಬಿಜೆಪಿ ಸಂಸದ ಹನ್ಸ್ ರಾಜ್ ಹನ್ಸ್, ಗುರುದಾಸ್ ಮನ್, ಕವಿತಾ ಪೌಡ್ವಲ್, ಜಸ್ಪಿಂದರ್ ನರುಲಾ, ಲಖ್ವಿಂದರ್ ವಡಾಲಿ ಅವರು ಪ್ರದರ್ಶನ ನೀಡಿದ್ದರು. 

ಈ ಬಗ್ಗೆ ಮಾಹಿತಿ ನೀಡಿರುವ ಮಾತಾ ವೈಷ್ಣೋದೇವಿ ಮಂದಿರ ಮಂಡಳಿಯ ಸಿಇಒ ಸಿಮ್ರಾನ್ ದೀಪ್ ಸಿಂಗ್, ಈ ವರ್ಷ ಒಂಬತ್ತು ದಿನಗಳ ಕಾಲ ನಡೆದ ನವರಾತ್ರಿ ಹಬ್ಬದಲ್ಲಿ ವೈಷ್ಣೋದೇವಿ ಮಂದರಿಕ್ಕೆ 3,64,643 ಭಕ್ತರು ಭೇಟಿ ನೀಡಿರುವುದು ದಾಖಲೆ ಪ್ರಮಾಣದ್ದಾಗಿದೆ ಎಂದು ಹೇಳಿದರು.

2018ರಲ್ಲಿ ಪ್ರಸಿದ್ಧ ವೈಷ್ಣೋದೇವಿ ಮಂದರಿಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 3.18ಲಕ್ಷ, 2017ರಲ್ಲಿ 3.03ಲಕ್ಷ, 2016ರಲ್ಲಿ 3.50 ಲಕ್ಷ, 2015ರಲ್ಲಿ 2.76 ಲಕ್ಷ, 2014ರಲ್ಲಿ 2 ಲಕ್ಷ ಎಂದು ವರದಿಯಲ್ಲಿ ತಿಳಿಸಿದೆ. ಅಂತೆಯೇ ನವರಾತ್ರಿ ಸಂದರ್ಭದಲ್ಲಿ 51,225 ಮಂದಿ ಭಕ್ತರಿಗೆ ಊಟದ ಸೇವೆ ದೊರಕಿತ್ತು. 55, 447 ಭಕ್ತರು ಸಣ್ಣ ಕುದುರೆ, ಪಲ್ಲಕ್ಕಿ ಮೂಲಕ ಗುಹೆಗೆ ಭೇಟಿ ನೀಡಿದ್ದರು. 71000 ಭಕ್ತರು ಕೇಬಲ್ ಕಾರ್ ವ್ಯವಸ್ಥೆ ಪಡೆದಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

SCROLL FOR NEXT