ದೇಶ

ಗಣ್ಯರ ವಿರುದ್ಧ ಎಫ್ಐಆರ್ : ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗೆ ನಟ ಕಮಲ್ ಹಾಸನ್ ಮನವಿ

Srinivasamurthy VN

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಪತ್ರ ಬರೆದ 49 ಗಣ್ಯ ವ್ಯಕ್ತಿಗಳ ವಿರುದ್ಧ ದಾಖಲಾದ ಎಫ್‌ಐಆರ್ ವಿಚಾರಕ್ಕೆ ಸಂಬಂಧಿಸಿದಂತೆ ನಟ ರಾಜಕಾರಣಿ ಕಮಲ್ ಹಾಸನ್ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಕ್ಕೆ ಆಗ್ರಹಿಸಿದ್ದಾರೆ.

ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಅವರು, 49 ಮಂದಿ ಗಣ್ಯರ ವಿರುದ್ಧ ದಾಖಲಾಗಿರುವ ದೇಶದ್ರೋಹ ಪ್ರಕರಣ ಹಾಗೂ ಎಫ್ ಐಆರ್ ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

'ಪ್ರಧಾನಿ ಮೋದಿ ಸಾಮರಸ್ಯದ ಭಾರತ ಬಯಸುತ್ತಾರೆ. ಸಂಸತ್ತಿನಲ್ಲಿನ ಅವರ ಹೇಳಿಕೆಗಳು ಇದನ್ನು ಧೃಡೀಕರಿಸುತ್ತವೆ. ರಾಜ್ಯ ಮತ್ತು ಅದರ ಕಾನೂನು  ಲಿಖಿತವಾಗಿ ಅನುಸರಿಸಬೇಕಲ್ಲವೇ? ನನ್ನ ಗೆಳೆಯರಲ್ಲಿ 49 ಮಂದಿ ದೇಶದ್ರೋಹ, ಪ್ರಧಾನ ಮಂತ್ರಿಯ ಆಕಾಂಕ್ಷೆಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. 

'ಪ್ರಜಾಪ್ರಭುತ್ವದೊಂದಿಗೆ ನ್ಯಾಯವನ್ನು ಎತ್ತಿಹಿಡಿಯಲು ಸುಪ್ರೀಂಕೋರ್ಟ್ ಮುಂದಾಗಬೇಕೆಂದು ಒಬ್ಬ ಸಾಮಾನ್ಯ ನಾಗರಿಕನಾಗಿ ವಿನಂತಿಸುತ್ತೇನೆ' ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದಾರೆ.

ಇನ್ನು ಕಳೆದ ಜುಲೈನಲ್ಲಿ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಮತ್ತು ಚಲನಚಿತ್ರ ನಿರ್ಮಾಪಕರಾದ ಅಪರ್ಣಾ ಸೇನ್ ಮತ್ತು ಮಣಿರತ್ನಂ ಸೇರಿದಂತೆ 49 ಮಂದಿ ಗಣ್ಯರು ಪ್ರಧಾನಿ ಮೋದಿಗೆ ಪತ್ರ ಬರೆದು, ದೇಶದಲ್ಲಿ ಹೆಚ್ಚುತ್ತಿರುವ ಸಾಮೂಹಿಕ ಹಲ್ಲೆ ಮತ್ತು ಹತ್ಯೆ ಮತ್ತು ಜೈ ಶ್ರೀ ರಾಮ್ ಘೋಷಣೆಯ ಹೇರಿಕೆ ವಿರುದ್ದ ಕಳವಳ ವ್ಯಕ್ತಪಡಿಸಿದರು. ಅಲ್ಲದೆ ಮುಸ್ಲಿಮರು, ದಲಿತರು ಮತ್ತು ಇತರ ಅಲ್ಪಸಂಖ್ಯಾತರ ಗುಂಪನ್ನು ಕೊಲ್ಲುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು, ಭಿನ್ನಾಭಿಪ್ರಾಯವಿಲ್ಲದೆ ಯಾವುದೇ ಪ್ರಜಾಪ್ರಭುತ್ವವಿಲ್ಲ ಎಂದು ಈ ಪತ್ರದಲ್ಲಿ ಒತ್ತಿ ಹೇಳಿದ್ದರು.

ಇದೇ ವಿಚಾರವಾಗಿ ಪತ್ರದಲ್ಲಿ ಸಹಿ ಮಾಡಿದ್ದ 49 ಗಣ್ಯರ ವಿರುದ್ಧ ಕಳೆದ ವಾರ ಬಿಹಾರದ ಮುಜಾಫರ್ ಪುರದಲ್ಲಿ ಪ್ರಕರಣ ದಾಖಲಾಗಿತ್ತು. ಬಿಹಾರ ಪೊಲೀಸರ ಪ್ರಕಾರ, ದೇಶದ್ರೋಹಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಹಲವಾರು ಸೆಕ್ಷನ್‌ ಗಳ ಅಡಿಯಲ್ಲಿ ಅವರ ಮೇಲೆ ಆರೋಪ ಹೊರಿಸಲಾಗಿದೆ . ಇದೇ ಕಾರಣಕ್ಕಾಗಿ ಎಫ್ ಐಆರ್ ದಾಖಲಾಗಿದೆ ಎಂದು ಹೇಳಿದ್ದರು.

SCROLL FOR NEXT