ದೇಶ

ಪಂಜಾಬ್ ನ ಫಿರೋಜ್‍ಪುರದಲ್ಲಿ ಪಾಕಿಸ್ತಾನದ ಮತ್ತೊಂದು ಡ್ರೋನ್ ಪತ್ತೆ

Lingaraj Badiger

ಚಂಡೀಗಢ: ಪಂಜಾಬ್ ನ ಫಿರೋಜ್‍ಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಪಾಕಿಸ್ತಾನದ ಮತ್ತೊಂದು ಡ್ರೋನ್  ಕಾಣಿಸಿಕೊಂಡಿದ್ದು ಹೈ ಅಲರ್ಟ್‌ನಲ್ಲಿರುವಂತೆ ಭಾರತೀಯ ಸೇನೆಗೆ ಹಾಗೂ ಪಂಜಾಬ್ ಪೊಲೀಸರಿಗೆ ಸೂಚನೆ ನೀಡಲಾಗಿದೆ.

ಮೂಲಗಳ ಪ್ರಕಾರ, ಭಾರತ-ಪಾಕಿಸ್ತಾನ ಗಡಿ ಪ್ರದೇಶದ ಹಜಾರ ಸಿಂಗ್ ವಾಲಾ ಗ್ರಾಮದಲ್ಲಿ ಮಂಗಳವಾರ ರಾತ್ರಿ 7.20ಕ್ಕೆ ಮತ್ತು 10.10ಕ್ಕೆ ಒಟ್ಟು ಎರಡು ಬಾರಿ ಡ್ರೋನ್ ಹಾರಾಡಿರುವುದು ಪತ್ತೆಯಾಗಿದೆ. ಒಮ್ಮೆ ಡ್ರೋನ್ ಭಾರತದ ಗಡಿಯೊಳಕ್ಕೆ ಪ್ರವೇಶಿಸಿದೆ ಎಂಬ ಮಾಹಿತಿ ಇದೆ. ಇದರಿಂದ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ಪಂಜಾಬ್ ಪೊಲೀಸರು ಪಾಕಿಸ್ತಾನದ ಡ್ರೋನ್‍ಗಳನ್ನು ಪತ್ತೆ ಹಚ್ಚಿದ್ದರು. ಈ ಡ್ರೋನ್ ಗಳು ಎಂಟು ಎಕರೆ ಪ್ರದೇಶದಲ್ಲಿ ಎಕೆ-47 ಬಂದೂಕುಗಳು, ಗ್ರೆನೇಡ್‍ಗಳು ಹಾಗೂ ಉಪಗ್ರಹ ಆಧಾರಿತ ಫೋನ್‍ಗಳನ್ನು ಕೆಳಗಡೆ ಉದುರಿಸಿತ್ತು. ಈ ಡ್ರೋನ್‍ಗಳು 5 ಕೆ.ಜಿ. ತೂಕವನ್ನು ಹೊತ್ತೊಯ್ಯುವ ಸಾಮಥ್ರ್ಯ ಹೊಂದಿದ್ದು, ಕಡಿಮೆ ಅಂತರದಲ್ಲಿ ಹಾಗೂ ಬಹಳ ವೇಗವಾಗಿ ಚಲಿಸುವ ಕಾರಣ ಸುಲಭವಾಗಿ ಈ ಡ್ರೋನ್‍ಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ.

ಈಗ ಮತ್ತೆ ಪಾಕಿಸ್ತಾನದ ಡ್ರೋನ್ ಗಳು ಪತ್ತೆಯಾಗಿದ್ದು, ಭದ್ರತಾಪಡೆಗಳು ವ್ಯಾಪಕ ತಪಾಸಣೆ ಕೈಗೊಳ್ಳುತ್ತಿದ್ದರೂ ಸೇನಾ ಪಡೆಗಳ ಕಣ್ಣು ತಪ್ಪಿಸಿ ಡ್ರೋನ್ ಮೂಲಕ ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ತಲುಪಿಸುವ ದುಸ್ಸಾಹಸದ ಪ್ರಯತ್ನವನ್ನು ಪಾಕಿಸ್ತಾನ ಮುಂದುವರಿಸಿದೆ.

SCROLL FOR NEXT