ದೇಶ

ಆರ್ ಬಿಐ ಗವರ್ನರ್ ಜತೆ ಮತ್ತೊಮ್ಮೆ ಮಾತುಕತೆ: ಪಿಎಂಸಿ ಠೇವಣಿದಾರರಿಗೆ ಸೀತಾರಾಮನ್ ಭರವಸೆ

Lingaraj Badiger

ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಕೋ-ಆಪರೇಟಿವ್ ಬ್ಯಾಂಕ್(ಪಿಎಂಸಿ) ಬಿಕ್ಕಟ್ಟು ಕುರಿತು ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ) ಗವರ್ನರ್ ಜೊತೆ ಮತ್ತೊಮ್ಮೆ ಮಾತುಕತೆ ನಡೆಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಹೇಳಿದ್ದಾರೆ.

ಇಂದು ಮುಂಬೈನ ಬಿಜೆಪಿ ಕಚೇರಿ ಮುಂದೆ ಜಮಾವಣೆಗೊಂಡಿದ್ದ ಕೆಲವು ಪಿಎಂಸಿ ಬ್ಯಾಂಕ್ ಠೇವಣಿದಾರರನ್ನು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸೀತಾರಾಮಾನ್, ಗ್ರಾಹಕರ ಹಿತ ಕಾಯುವುದಕ್ಕಾಗಿ ಕಾನೂನಾತ್ಮಕ ಬದಲಾವಣೆ ತರುವುದಾಗಿ ಭರವಸೆ ನೀಡಿದ್ದಾರೆ.

ಶೀಘ್ರದಲ್ಲೇ ಹಣಕಾಸು ಸಚಿವಾಲಯ ಹಾಗೂ ಆರ್ಥಿಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳು ಆರ್ ಬಿಐ ಡೆಪ್ಯೂಟಿ ಗವರ್ನರ್ ಅವರನ್ನು ಭೇಟಿ ಮಾಡಲಿದ್ದು, ಬಹು - ರಾಜ್ಯ ಸಹಕಾರಿ ಬ್ಯಾಂಕ್ ಗಳ ಕಾರ್ಯನಿರ್ವಹಣೆಯ ನ್ಯೂನತೆಗಳನ್ನು ಸರಿಪಡಿಸಲು ಕಾನೂನು ತಿದ್ದುಪಡಿಯ ಅಗತ್ಯ ಇದೆಯೇ ಎಂಬುದನ್ನು ಪರಿಶೀಲಿಸಲಿದ್ದಾರೆ ಎಂದರು.

ಈ ಸಂಬಂಧ ನಾನು ಇಂದು ಸಂಜೆಯೇ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರೊಂದಿಗೆ ಮಾತನಾಡುತ್ತೇನೆ ಮತ್ತು ಠೇವಣಿದಾರರ ಆಸಕ್ತಿ ಮತ್ತು ಅವರ ತುರ್ತು ಸಂಕಟವನ್ನು ಗಮನಕ್ಕೆ ತರುತ್ತೇನೆ ಎಂದು ಸೀತಾರಾಮನ್ ತಿಳಿಸಿದ್ದಾರೆ.

ಪಿಎಂಸಿ ಗ್ರಾಹಕರು ಗರಿಷ್ಠ 25 ಸಾವಿರ ರೂಪಾಯಿ ಮಾತ್ರ ವಿತ್ ಡ್ರಾ ಮಾಡಲು ಆರ್ ಬಿಐ ಅವಕಾಶ ನೀಡಿದ್ದು, ಇದರಿಂದ ಆಕ್ರೋಶಗೊಂಡ ಗ್ರಾಹಕರು ಬುಧವಾರ ಮುಂಬೈ ಕೋರ್ಟ್ ಮುಂದೆ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಆರೋಪಿಗಳ ವಿರುದ್ಧ ಆರ್ ಬಿಐ ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದ ಪಿಎಂಸಿ ಗ್ರಾಹಕರು, ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದ್ದರು.

ಪಿಎಂಸಿ ಬ್ಯಾಂಕ್ ನಲ್ಲಿ  ದೊಡ್ಡ ಮಟ್ಟದ ಅವ್ಯವಹಾರ ನಡೆದಿದ್ದು, ಬರೋಬ್ಬರಿ 21 ಸಾವಿರ ನಕಲಿ ಖಾತೆಗಳನ್ನು ಸೃಷ್ಟಿಸಲಾಗಿತ್ತು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಕೋರ್ಟ್ ಗೆ ತಿಳಿಸಿದ್ದಾರೆ.

SCROLL FOR NEXT