ದೇಶ

ಥಾಣೆ ರೈಲು ನಿಲ್ದಾಣದಲ್ಲೇ ಹೆರಿಗೆ ನೋವು: ಒಂದು ರೂಪಾಯಿ ಕ್ಲಿನಿಕ್ ನಲ್ಲಿ ಡೆಲಿವರಿ!

Nagaraja AB

ಥಾಣೆ :ಮುಂಬೈಗೆ ತೆರಳುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 29  ವರ್ಷ ವಯಸ್ಸಿನ ತುಂಬು ಗರ್ಭಿಣಿಗೆ ಮಹಾರಾಷ್ಟ್ರದ ಥಾಣೆ ನಿಲ್ದಾಣದಲ್ಲಿಯೇ ನೋವು ಕಾಣಿಸಿಕೊಂಡು, ಅಲ್ಲಿನ ಒಂದು ರೂಪಾಯಿ ಚಿಕಿತ್ಸಾಲಯದಲ್ಲಿ ಹೆರಿಗೆಯಾದ ಘಟನೆ ನಡೆದಿದೆ.

ಕರ್ಜನತ್ ನಿಂದ ಪರೇಲ್ ಗೆ ಹೊರಟಿದ್ದ ಸುಭಂತಿ ಪಾತ್ರಾ ಅವರಿಗೆ ಥಾಣೆಯ ಬಳಿ ಹೆರಿಗೆ ನೋವು ಕಾಣಿಸಿಕೊಂಡಿತ್ತು ಎಂದು ಒಂದು ರೂಪಾಯಿ ಚಿಕಿತ್ಸಾಲಯದ ಕಾರ್ಯನಿರ್ವಹಣಾಧಿಕಾರಿ ಡಾ ರಾಹುಲ್ ಗುಳೆ ತಿಳಿಸಿದ್ದಾರೆ.

ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ರೈಲ್ವೆ ಅಧಿಕಾರಿಗಳು ಕೂಡಲೇ ಪ್ಲಾಟ್‌ಫಾರಂನಲ್ಲಿರುವ  ಚಿಕಿತ್ಸಾಲಯಕ್ಕೆ ಕರೆತಂದರು.  ಅರ್ಧ ಗಂಟೆಯಲ್ಲಿ ಸುಸೂತ್ರವಾಗಿ ಹೆರಿಗೆಯಾಗಿ, ತಾಯಿ ಹಾಗೂ ಗಂಡು ಮಗು ಆರೋಗ್ಯವಾಗಿದ್ದಾರೆ.ಹೆಚ್ಚುವರಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದ್ದಾರೆ. 

ರೈಲ್ವೆ ನಿಲ್ದಾಣದಲ್ಲಿ ತುರ್ತು ಚಿಕಿತ್ಸೆಗಾಗಿ ಈ ಒಂದು ರೂಪಾಯಿ ಚಿಕಿತ್ಸಾಲಯವನ್ನು ತೆರೆಯಲಾಯಿತು.  ಇದರ ಮೂಲ ಅಗತ್ಯ ಸೇವೆ ಒದಗಿಸಲು ನಮಗೆ ಅವಕಾಶ ನೀಡಿದ ರೈಲ್ವೆ ಅಧಿಕಾರಿಗಳಿಗೆ ಧನ್ಯವಾದ. ಈ ಹೆರಿಗೆಯ ಮೂಲಕ ಒಂದು ರೂಪಾಯಿ ಚಿಕಿತ್ಸಾಲಯದ ಮಹತ್ವ ಹಾಗೂ ರೈಲು ನಿಲ್ದಾಣದಲ್ಲಿ ಇಂತಹ ಚಿಕಿತ್ಸಾಲಯದ ಅಗತ್ಯವಿದೆ ಎಂಬುದು ಸಾಬೀತಾಗಿದೆ ಎಂದು ಡಾ ಗುಳೆ ಹೇಳಿದ್ದಾರೆ.

SCROLL FOR NEXT