ದೇಶ

ಪ್ರಧಾನಿ ಮೋದಿ ಸೋದರನ ಮಗಳ ಪರ್ಸ್ ಕದ್ದಿದ್ದ ಖದೀಮರ ಸೆರೆ

Nagaraja AB

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋದರನ ಮಗಳ ಪರ್ಸ್ ದೋಚಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಗುಜರಾತಿನಿಂದ ದೆಹಲಿಗೆ ಬಂದಿದ್ದ ದಮಯಂತಿ ಗುಜರಾತ್ ಭವನದ ಬಳಿ ಆಟೋದಿಂದ ಕೆಳಗಿಳಿಯುವ ವೇಳೆ ಅವರ ಬಳಿಗೆ ಬಂದ ದುಷ್ಕರ್ಮಿಗಳು ಪರ್ಸ್ ಕಸಿದು ಪರಾರಿಯಾಗಿದ್ದರು. ಪರ್ಸ ನಲ್ಲಿ 56 ಸಾವಿರ ರೂ. ಹಣ , ಎರಡು ಮೊಬೈಲ್ ಪೋನ್ ಗಳಿದ್ದವು. ಜೊತೆಗೆ ಕೆಲ ಪ್ರಮುಖ ದಾಖಲೆಗಳಿದ್ದವು ಎಂದು ದಮಯಂತಿ ತಿಳಿಸಿದ್ದರು.
 
ಈ ದೂರಿನ ಅನ್ವಯ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

 ಹರಿಯಾಣದ ಸೊನಿಪಾಟ್ ನಲ್ಲಿ ಸಂಬಂಧಿಕರ ಮನೆಯಲ್ಲಿ ತಂಗಿದ್ದ  ಗೌರವ್ ಅಲಿಯಾಸ್ ನೊನು (21) ಹಾಗೂ ದೆಹಲಿಯ ಸುಲ್ತಾನ್ ಪುರಿಯಲ್ಲಿದ್ದ ಬಾದಲ್ (22 ) ಎಂಬವರನ್ನು ಭಾನುವಾರ ಸಂಜೆ ಬಂಧಿಸಲಾಗಿದೆ ಎಂದು ಡಿಸಿಪಿ ಮೊನಿಕಾ ಭಾರದ್ವಾಜ್ ತಿಳಿಸಿದ್ದಾರೆ. 

ಗೌರವ್ ಸದಾರ್ ಬಜಾರ್ ನಿವಾಸಿ. ಕೆಲ ದಿನ  ಪಹರ್ ಗಂಗ್ ನ ನಬಿ ಕರೀಮ ಬಳಿ ವಾಸಿಸುತ್ತಿದ್ದ, ಬಾದಲ್ ಸುಲ್ತಾನ್ ಪುರಿಯಲ್ಲಿ ವಾಸಿಸುತ್ತಿದ್ದ ಎಂದು ಅವರು   ಹೇಳಿದ್ದಾರೆ.

ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಂತರ ಆರೋಪಿಗಳನ್ನು ಬಂಧಿಸಲಾಗಿದ್ದು ದಮಯಂತಿ ಮೋದಿಯಿಂದ ದೋಚಲಾಗಿದ್ದ 56 ಸಾವಿರ ಹಣ, ವಾಚ್, ಹಾಗೂ ದಾಖಲಾತಿಗಳನ್ನು ವಶಕ್ಕೆ ಪಡೆಯಲಾಗಿದೆ. ಕಳ್ಳತನ ಮಾಡಲು ಬಳಸಲಾಗಿದ್ದ ಗೌರವ್ ಸ್ಕೂಟರ್ ನ್ನು ವಶಕ್ಕೆ ಪಡೆಯಲಾಗಿದೆ ಎಂದು  ತಿಳಿಸಿದ್ದಾರೆ.

ಆಟೋದಲ್ಲಿದ್ದ ದಮಯಂತಿಯನ್ನು ಒಂದು ಕಿಲೋ ಮೀಟರ್ ದೂರದವರೆಗೂ ಹಿಂಬಾಲಿಸಿ ನಂತರ ಕಳ್ಳತನ ಮಾಡಿದ್ದಾಗಿ ಆರೋಪಿ ಗೌರವ್ ವಿಚಾರಣೆ ವೇಳೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT