ದೇಶ

ನೀತಿ ಆಯೋಗದ ಹೊಸ ಆವಿಷ್ಕಾರ ಸೂಚಿ ಪಟ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರ ಸ್ಥಾನ

Srinivasamurthy VN

ಇದೇ ಮೊದಲ ಬಾರಿಗೆ ನೀತಿ ಆಯೋಗದಿಂದ ಪಟ್ಟಿ ಬಿಡುಗಡೆ, ಕರ್ನಾಟಕದ ಬಳಿಕ ತಮಿಳುನಾಡು, ಮಹಾರಾಷ್ಟ್ರ

ನವದೆಹಲಿ: ನೀತಿ ಆಯೋಗ ಬಿಡುಗಡೆ ಮಾಡಿರುವ ಹೊಸ ಆವಿಷ್ಕಾರ ಸೂಚಿ 2019ರ ಪಟ್ಟಿಯಲ್ಲಿ ನಮ್ಮ ಕರ್ನಾಟಕ ಅಗ್ರ ಸ್ಥಾನ ಪಡೆದಿದೆ.

ಹೌದು.. ನೀತಿ ಆಯೋಗ ಇದೇ ಮೊದಲ ಬಾರಿಗೆ ಸಿದ್ಧಗೊಳಿಸಲಾಗಿರುವ ಅಖಿಲ ಭಾರತ ಆವಿಷ್ಕಾರ ಸೂಚಿ-2019 ಪಟ್ಟಿಯಲ್ಲಿ ಕರ್ನಾಟಕವು ಅಗ್ರ ಸ್ಥಾನದಲ್ಲಿದೆ. ಜಾಗತಿಕ ಆವಿಷ್ಕಾರ ಸೂಚಿಯ ಮಾದರಿಯಲ್ಲಿ ಸಿದ್ಧಗೊಳಿಸಲಾಗಿರುವ ಭಾರತ ಆವಿಷ್ಕಾರ ಸೂಚಿ-2019 ಪ್ರದೇಶಗಳಾದ್ಯಂತ ಆವಿಷ್ಕಾರ ಅಭಿಯಾನವನ್ನು ಉತ್ತೇಜಿಸಲು ನೀತಿಗಳನ್ನು ರೂಪಿಸುವಲ್ಲಿ ಸರ್ಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಯ ಆವಿಷ್ಕಾರಕ್ಕೆ ಪೂರಕ ವಾತಾವರಣವನ್ನು ವಿಶ್ಲೇಷಿಸುತ್ತದೆ.

ಸೂಚಿ ವರದಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ಅವರು ಗುರುವಾರ ಬಿಡುಗಡೆಗೊಳಿಸಿದರು. ಪಟ್ಟಿಯಲ್ಲಿ ಕರ್ನಾಟಕದ ಬಳಿಕ ಸ್ಥಾನದಲ್ಲಿ 
ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಿದ್ದು, ಬಿಹಾರ,ಜಾರ್ಖಂಡ್ ಮತ್ತು ಛತ್ತೀಸ್‌ಗಡ ರಾಜ್ಯಗಳು ಪಟ್ಟಿಯಲ್ಲಿ ಕೊನೆಯ ಸ್ಥಾನಗಳಲ್ಲಿವೆ.

ಪಟ್ಟಿಯಲ್ಲಿ ಈಶಾನ್ಯ ಭಾರತ ಮತ್ತು ಗುಡ್ಡಗಾಡು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು/ನಗರ ಮತ್ತು ಸಣ್ಣ ರಾಜ್ಯಗಳು ಹೀಗೆ ಮೂರು ವಿಭಾಗಗಳಲ್ಲಿ ಸೂಚಿಯನ್ನು ಸಿದ್ಧಪಡಿಸಲಾಗಿದೆ. ಈಶಾನ್ಯ ಭಾರತ ವಿಭಾಗದಲ್ಲಿ ಸಿಕ್ಕಿಂ ಅಗ್ರಸ್ಥಾನದಲ್ಲಿದ್ದರೆ, ಕೇಂದ್ರಾಡಳಿತ ಪ್ರದೇಶ ವಿಭಾಗದಲ್ಲಿ ರಾಜಧಾನಿ ದೆಹಲಿಗೆ ಈ ಹೆಗ್ಗಳಿಕೆ ಲಭಿಸಿದೆ.

ಇನ್ನು ತೆಲಂಗಾಣ, ಹರ್ಯಾಣ, ಕೇರಳ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ಆಂಧ್ರಪ್ರದೇಶ ಆವಿಷ್ಕಾರ ಸೂಚಿಯಲ್ಲಿ ಮೇಲಿನ ಸ್ಥಾನಗಳಲ್ಲಿರುವ ಇತರ ರಾಜ್ಯಗಳಲ್ಲಿ ಸೇರಿವೆ.

ಜಾಗತಿಕ ಇನೋವೇಷನ್ ಸೂಚ್ಯಂಕದ ಮಾನ ದಂಡದಂತೆಯೇ ಭಾರತದ ನವೀನ ಪರಿಕಲ್ಪನೆಯ ಸೂಚ್ಯಂಕ ಪಟ್ಟಿ ಅಭಿವೃದ್ಧಿಪಡಿಸಲಾಗಿದ್ದು, ರಾಜ್ಯಗಳ ನಾವೀನ್ಯತೆ ಸಾಮರ್ಥ್ಯಗಳು ಮತ್ತು ಕಾರ್ಯಕ್ಷಮತೆಯನ್ನು ಪರೀಕ್ಷಿಸುವ ಗುರಿಯನ್ನು ಈ ಸೂಚ್ಯಂಕ ಹೊಂದಿದೆ.

SCROLL FOR NEXT