ದೇಶ

ಪಿಯೂಷ್ ಗೋಯಲ್ ನನ್ನ ವೃತ್ತಿಪರತೆ ಪ್ರಶ್ನಿಸುತ್ತಿದ್ದಾರೆ: ನೊಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ

Lingaraj Badiger

ನವದೆಹಲಿ: ಬಿಜೆಪಿ ನಾಯಕರು ಮಾಡುತ್ತಿರುವ ವೈಯಕ್ತಿಕ ಟೀಕೆಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಭಾರತೀಯ ಮೂಲದ ಅಮೆರಿಕ ಅರ್ಥಶಾಸ್ತ್ರಜ್ಞ ಹಾಗೂ 2019ನೇ ಸಾಲಿನ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಅವರು, ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ನನ್ನ ವೃತ್ತಿಪರತೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ಶನಿವಾರ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಂತೆಯೇ ಬಿಜೆಪಿ ಸರ್ಕಾರ ಸಹ ಒಂದು ನಿರ್ದಿಷ್ಟ ಆದಾಯದ ಅಡಿಯಲ್ಲಿರುವ ಜನರ ಸಂಖ್ಯೆ ಎಷ್ಟು ಎಂದು ಕೇಳಿದ್ದರೆ, ನಾನು ಅವರಿಗೆ ಸತ್ಯವನ್ನು ಹೇಳುತ್ತಿರಲಿಲ್ಲವೇ? ನಾನು ಅವರಿಗೆ ನಿಖರವಾಗಿಯೇ ಹೇಳಲು ಸಿದ್ಧನಾಗಿದ್ದೆ. ನಾನು ಎಲ್ಲರೊಂದಿಗೆ ವೃತ್ತಿಪರನಾಗಿರಲು ಬಯಸುತ್ತೇನೆ. ನನಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ಎಂದು ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಬ್ಯಾನರ್ಜಿ ಹೇಳಿದ್ದಾರೆ.

ಆರ್ಥಿಕ ಚಿಂತನೆಯಲ್ಲಿ ನಾನು ಪಕ್ಷಾತೀತನಾಗಿದ್ದೇನೆ. ಬಿಜೆಪಿ ಸರ್ಕಾರ ಸೇರಿದಂತೆ ನಾನು ಹಲವು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡಿದ್ದೇನೆ. ಈ ಹಿಂದೆ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಗುಜರಾತ್ ಮಾಲಿನ್ಯ ಮಂಡಳಿಯಲ್ಲಿ ಕೆಲಸ ಮಾಡಿದ್ದೇನೆ ಮತ್ತು ಉತ್ತಮ ಅನುಭವ ಸಹ ಹೊಂದಿದ್ದೇನೆ ಎಂದಿದ್ದಾರೆ.

ಭಾರತದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದನ್ನು ನೀವು ಗಂಭೀರವಾಗಿ ಪರಿಗಣಿಸಬೇಕು. ಅಧಿಕ ಮುಖಬೆಲೆಯ ನೋಟು ನಿಷೇಧ ಹಾಗೂ ತರಾತುರಿಯಲ್ಲಿ ಜಿಎಸ್ ಟಿ ಜಾರಿಗೊಳಿಸಿದ್ದೇ ಆರ್ಥಿಕ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಬ್ಯಾನರ್ಜಿ ವಿವರಿಸಿದ್ದಾರೆ.

ನಿನ್ನೆಯಷ್ಟೇ ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋಯಲ್, ನೊಬೆಲ್ ಪ್ರಶಸ್ತಿ ಪಡೆದ ಅಭಿಜಿತ್ ಬ್ಯಾನರ್ಜಿ ಅವರನ್ನು ನಾನು ಅಭಿನಂದಿಸುತ್ತೇನೆ. ಆದರೆ ಅವರು ಎಡ ಪಂಥೀಯ ವಿಚಾರಧಾರೆ ಹೊಂದರುವುದು ನಿಮಗೆಲ್ಲಾ ಗೊತ್ತು ಎಂದಿದ್ದರು. 

SCROLL FOR NEXT