ದೇಶ

ತ್ರಿವಳಿ ತಲಾಕ್ ಕಾನೂನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ 

Raghavendra Adiga

ನವದೆಹಲಿ: ತ್ವರಿತ ತ್ರಿವಳಿ ತಲಾಕ್ ಅಪರಾಧ ಎಂದು ಹೇಳುವ ಕಾನೂನು ಪ್ರಶ್ನಿಸಿ  ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಸೋಮವಾರ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದೆ.

ಮುಸ್ಲಿಂ ಮಹಿಳಾ (ವಿವಾಹದ ಹಕ್ಕುಗಳ ಸಂರಕ್ಷಣೆ) ಕಾಯ್ದೆ, 2019 ತಲಾಕ್-ಇ-ಬಿಡ್ಡತ್ ಅಥವಾ ಯಾವುದೇ ಬಗೆಯ ತಲಾಕ್ ಅನ್ನು ಕಾನೂನುಬಾಹಿರ ಎಂದು ಘೋಷಿಸುತ್ತದೆ. ಒಂದೇ ಘಳಿಗೆಯಲ್ಲಿ ಮೂರು ಬಾರಿ ಆಡುವ ಅಥವಾ ಬರೆಯುವ ಅಥವಾ  ಎಸ್‌ಎಂಎಸ್ ಅಥವಾ ವಾಟ್ಸಾಪ್ ಅಥವಾ ಇನ್ನಾವುದೇ ಎಲೆಕ್ಟ್ರಾನಿಕ್ ಚಾಟ್‌ನಲ್ಲಿ ಕೊಡಲಾಗುವ ತಲಾಕ್ ಕಾನೂನುಬಾಹಿರವಾಗಿದೆ.

ಯಾವುದೇ ಮುಸ್ಲಿಂ ಪತಿಗೆ ತನ್ನ ಹೆಂಡತಿಗೆ ಕಾನೂನುಬಾಹಿರ ತಲಾಕ್ ನೀಡಿದ್ದಾದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬೇಕು ಮತ್ತು ದಂಡಕ್ಕೆ ಹೊಣೆಗಾರನಾಗಿರಬೇಕು ಎಂದು ಕಾನೂನು ಹೇಳಿದೆ. ಆದರೆ ಎಐಎಂಪಿಎಲ್ಬಿ ಹಾಗೂ ಕಮಲ್ ಫಾರೂಕಿ ಅವರ ಮನವಿಯು ಈ ಕಾಯಿದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದೆ, ಇದು ಸ್ಪಷ್ಟವಾಗಿ ಅನಿಯಂತ್ರಿತವಾಗಿದೆ ಮತ್ತು ಸಂವಿಧಾನದ 14, 15, 20 ಮತ್ತು 21 ನೇ ವಿಧಿಗಳನ್ನು ಉಲ್ಲಂಘಿಸಿದೆ ಎಂದದ್ದಲ್ಲದೆ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಅನಗತ್ಯ ಹಸ್ತಕ್ಷೇಪಕ್ಕೆ ಕಾರಣವಾಗಲಿದೆ ಎಂದು ಅವರು ವಾದಿಸಿದ್ದಾರೆ.

"ಈ ಕಾನೂನು ವ್ಯಕ್ತಿಯ ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದಂಡದ ಪರಿಣಾಮಗಳನ್ನು ಹೇಳಿರುವ ಯಾವುದೇ ಕಾಯ್ದೆಯು ತಪ್ಪನ್ನು ವ್ಯಾಖ್ಯಾನಿಸುವುದು ಅಗತ್ಯ. ಇದು ಕಾನೂನಿನ ಪ್ರಾಥಮಿಕ ತತ್ವವಾಗಿದೆ  ಇದರ ಬಗ್ಗೆ ಮುಸ್ಲಿಂ ಸಮುದಾಯದ ಪುರುಷರಲ್ಲಿ ವ್ಯಾಪಕ ಅಸಮಾಧಾನವಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅಂದಹಾಗೆ ಈ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಂಬಂಧ ಸುಪ್ರೀಂ ಕೋರ್ಟ್ ಇನ್ನಷ್ಟೇ ತೀರ್ಮಾನಿಸಬೇಕಿದೆ.

SCROLL FOR NEXT