ದೇಶ

ಪ್ರಧಾನಿ ಮೋದಿ ಭೇಟಿ ಬಳಿಕ ನೊಬೆಲ್ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಹೇಳಿದ್ದಿಷ್ಟು

Srinivas Rao BV

ನವದೆಹಲಿ: ಅಚ್ಚರಿಯ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಅಭಿಜಿತ್ ಬ್ಯಾನರ್ಜಿ ಪ್ರಧಾನಿ ಮೋದಿ ತಮ್ಮಲ್ಲಿ ಏನು ಹೇಳಿದರೆಂಬ ಬಗ್ಗೆ ಮಾಹಿತಿ ನೀಡಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು ಗೌರವದ ಸಂಗತಿಯಾಗಿತ್ತು. ಪ್ರಧಾನಿ ಮೋದಿ ಅವರು ಭಾರತದ ಕುರಿತು ತಮ್ಮ ಚಿಂತನಾ ಶೈಲಿಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಆ ಚಿಂತನಾ ಶೈಲಿ  ವಿಶಿಷ್ಟವಾದದ್ದು ಎಂದು ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ. ಇದೇ ವೇಳೆ ಲಘು ಹಾಸ್ಯವನ್ನೂ ಮಾಡಿದ ಪ್ರಧಾನಿ "ಮಾಧ್ಯಮಗಳು ನನ್ನನ್ನು ಹೇಗೆ ಮೋದಿ ವಿರೋಧಿ ಹೇಳಿಕೆಗಾಗಿ ಬಲೆಗೆ ಕೆಡವಲು ಯತ್ನಿಸುತ್ತಿವೆ ಎಂಬ ಬಗ್ಗೆಯೂ ತಮಾಷೆ ಮಾಡಿದರು" ಎಂದು ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ. 

ಮೋದಿ ಟಿವಿ ನೋಡುತ್ತಾರೆ, ನಿಮ್ಮನ್ನು ಮೋದಿ ನೋಡುತ್ತಿದ್ದಾರೆ, ನೀವೇನು ಮಾಡಲು ಯತ್ನಿಸುತ್ತಿದ್ದೀರಿ ಎಂಬುದು ಮೋದಿಗೆ ಗೊತ್ತಿದೆ ಎಂದು ಡಾ.ಬ್ಯಾನರ್ಜಿ ಮಾಧ್ಯಮಗಳ ಕಾಲೆಳೆದಿದ್ದಾರೆ. 

ಮೋದಿ ಜೊತೆಗಿನ ಭೇಟಿಯನ್ನು ಅತ್ಯಂತ ವಿಶಿಷ್ಟ ಎಂದು ಹೇಳಿರುವ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ಆಡಳಿತ ಹಾಗೂ ಸರ್ಕಾರಿ ಅಧಿಕಾರಿಗಳ ಬಗ್ಗೆ ಮಾತನಾಡಿದರು. ಪ್ರಮುಖವಾಗಿ ಆಡಳಿತದ ಬಗ್ಗೆ ಮಾತನಾಡಿದ ಮೋದಿ, ಸರ್ಕಾರಿ ಅಧಿಕಾರಿಗಳ ಸುಧಾರಣೆಗೆ ತಮ್ಮ ಯತ್ನವನ್ನು ವಿವರಿಸಿದರು ಎಂದು ಬ್ಯಾನರ್ಜಿ ಹೇಳಿದ್ದಾರೆ.

ಅಧಿಕಾರಿಗಳನ್ನು ಹೆಚ್ಚು ಸ್ಪಂದಿಸುವ ಜನರ ದೃಷ್ಟಿಕೋನವನ್ನು ಪರಿಗಣಿಸುವ ಹಾಗೂ ವಾಸ್ತವತೆಗೆ ತೆರೆದುಕೊಳ್ಳುವಂತೆ ಮಾಡುತ್ತಿರುವ ಯತ್ನಗಳನ್ನು ಮೋದಿ ವಿವರಿಸಿದ್ದಾರೆ. ವಾಸ್ತವತೆಯನ್ನು ಅರಿತು ಕೆಲಸ ಮಾಡುವ ಅಧಿಕಾರಿಗಳ ವರ್ಗ ಭಾರತಕ್ಕೆ ಅತ್ಯಂತ ಅವಶ್ಯಕ, ಅದು ಇಲ್ಲವಾದಲ್ಲಿ ನಮಗೆ ಸರ್ಕಾರವೂ ಸ್ಪಂದಿಸದ ವ್ಯವಸ್ಥೆಯಾಗಿಬಿಡುತ್ತದೆ ಎಂದು ಡಾ.ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT