ಸ್ಟಾಕ್ಹೋಮ್: ಮುಂದಿನ ನಾಲ್ಕರಿಂದ ನಾಲ್ಕೂವರೆ ವರ್ಷಗಳಲ್ಲಿ ರೈಲುಗಳಲ್ಲಿ ವೈಫೈ ಸೇವೆ ಒದಗಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಸ್ವೀಡನ್ ನಲ್ಲಿರುವ ಪಿಯೂಷ್ ಗೋಯಲ್ ಎಎನ್ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಪ್ರಸ್ತುತ ವೈಫೈ ಸೇವೆ 5 ಸಾವಿರದ 150 ರೈಲ್ವೆ ನಿಲ್ದಾಣಗಳಲ್ಲಿ ಸಿಗುತ್ತಿದೆ. ವೈಫೈ ಸೇವೆಯನ್ನು ಎಲ್ಲಾ 6 ಸಾವಿರದ 500 ನಿಲ್ದಾಣಗಳಲ್ಲಿ ಮುಂದಿನ ವರ್ಷದ ವೇಳೆಗೆ ಒದಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ರೈಲುಗಳ ಒಳಗೆ ವೈಫೈ ಸೇವೆ ಲಭ್ಯವಾಗುವ ಬಗ್ಗೆ ಮಾತನಾಡಿದ ಅವರು, ಇದು ಹೆಚ್ಚು ಕ್ಷಿಷ್ಟಕರ ತಂತ್ರಜ್ಞಾನ ವಿಷಯ. ಚಲಿಸುತ್ತಿರುವ ರೈಲಿನಲ್ಲಿ ವೈಫೈ ಸೇವೆ ನೀಡುವುದಕ್ಕೆ ಸಾಕಷ್ಟು ಹೂಡಿಕೆ ಬೇಕು. ಟವರ್ ಹಾಕಬೇಕು, ರೈಲುಗಳ ಒಳಗೆ ಉಪಕರಣಗಳನ್ನಿಡಬೇಕು. ಇದಕ್ಕಾಗಿ ವಿದೇಶಗಳಿಂದ ಹೂಡಿಕೆ ಮತ್ತು ತಂತ್ರಜ್ಞಾನ ತರಿಸಬೇಕಾಗಬಹುದು ಎಂದರು.
ಇನ್ನೂ ನಾಲ್ಕೈದು ವರ್ಷಗಳಲ್ಲಿ ರೈಲ್ವೆಗಳು ಸಂಪೂರ್ಣವಾಗಿ ವಿದ್ಯುದ್ದೀಕರಣವಾಗಲಿದೆ. ರೈಲ್ವೆ ಭೂಮಿಗಳಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಗಳನ್ನು ತರಲು ಯೋಜಿಸುತ್ತಿದ್ದೇವೆ. ರೈಲ್ವೆ ಭೂಮಿಗಳನ್ನು ಸೋಲಾರ್ ಸ್ಥಾಪನೆಗೆ ಬಳಸಲು ಕೂಡ ಚಿಂತನೆ ನಡೆಯುತ್ತಿದೆ. ಪ್ರಧಾನಿಯವರ ನಾಯಕತ್ವದಲ್ಲಿ ಭಾರತೀಯ ರೈಲ್ವೆಯನ್ನು ವಿಶ್ವದಲ್ಲಿಯೇ ಶೂನ್ಯ ವಾಯುಮಾಲಿನ್ಯ ರೈಲ್ವೆಯಾಗಿ ಪರಿವರ್ತಿಸಲು ಬಯಸುತ್ತಿದ್ದೇವೆ ಎಂದಿದ್ದಾರೆ.