ಅನರ್ಹ ಶಾಸಕರು 
ದೇಶ

ಅನರ್ಹ ಶಾಸಕರ ಅರ್ಜಿ ವಿಚಾರಣೆ ಅಂತ್ಯ, ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ 17 ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮುಕ್ತಾಯಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.

ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾದ 17 ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಮುಕ್ತಾಯಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.

ಅನರ್ಹತೆ ಪ್ರಶ್ನಿಸಿ 17 ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿದ ನ್ಯಾಯಮೂರ್ತಿ ಎನ್. ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ, 10 ದಿನಗಳ ಬಳಿಕ ತೀರ್ಪು ಪ್ರಕಟಿಸುವುದಾಗಿ ಹೇಳಿದೆ.

ಇಂದು ಕಾಂಗ್ರೆಸ್ ಪರ ವಾದ ಮಂಡಿಸಿದ ಕಪಿಲ್ ಸಿಬಲ್ ಅವರು, 17 ಶಾಸಕರನ್ನು ಅನರ್ಹಗೊಳಿಸಿದ ಮಾಜಿ  ಸ್ಪೀಕರ್ ರಮೇಶ್ ಕುಮಾರ್  ಕ್ರಮವನ್ನು ಬಲವಾಗಿ ಸಮರ್ಥಿಸಿ, ಅನರ್ಹ ಶಾಸಕರ ನಡೆಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.

ಅನರ್ಹಗೊಂಡ 17  ಶಾಸಕರಿಗೆ ಮೈತ್ರಿ ಸರ್ಕಾರ ಪತನಗೊಳಿಸುವ ದುರುದ್ದೇಶವಿತ್ತು. ಹೀಗಾಗಿ  ಭಾರತೀಯ ಜನತಾ ಪಕ್ಷದ ಜೊತೆ ಸೇರಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಮೇಲಾಗಿ ಪಕ್ಷದ ವಿಪ್  ಉಲ್ಲಂಘಿಸಿದ್ದಾರೆ. ಶಾಸಕರನ್ನು ನಿಯಮಾನುಸಾರ ಅನರ್ಹಗೊಳಿಸುವ ಅಧಿಕಾರ ಸ್ಪೀಕರ್ ಅವರಿಗೆ ಇದೆ. ಅಂದಿನ ಸ್ಪೀಕರ್ ರಮೇಶ್ ಕುಮಾರ್ ತೆಗೆದುಕೊಂಡ ನಿರ್ಣಯ, ಕ್ರಮ ಸರಿಯಾಗಿದೆ ಎಂದು ವಾದ ಮಂಡಿಸಿದರು. 

ರಾಜೀನಾಮೆ ನೀಡಿದ ಬಳಿಕ ಬಿಜೆಪಿನಾಯಕರು ಮತ್ತು  ಶಾಸಕರ ಜೊತೆ ಅನರ್ಹ ಶಾಸಕರು ಕಾಣಿಸಿಕೊಂಡಿದ್ದರು ಎಂದು ಮಲ್ಲೇಶ್ವರಂ ಬಿಜೆಪಿ ಶಾಸಕ ಹಾಗೂ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಹೆಸರನ್ನು ಸಿಬಲ್ ಉಲ್ಲೇಖಿಸಿದ್ದಾರೆ.

ಸರ್ಕಾರ ತಮ್ಮ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ರಾಜೀನಾಮೆ ನೀಡಿದ್ದೇ ಆಗಿದ್ದಲ್ಲಿ, ರಾಜೀನಾಮೆ ಸಲ್ಲಿಸಿದ ನಂತರ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಗೆ ಹೋಗಿ ಕ್ಷೇತ್ರದ ಮತದಾರರಿಗೆ ಅನ್ಯಾಯಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕಿತ್ತು. ಅದನ್ನು ಬಿಟ್ಟು  ಬಿಜೆಪಿ ನಾಯಕರ ಜೊತೆ  ಖಾಸಗಿ ವಿಮಾನದಲ್ಲಿ ಮುಂಬೈಗೆ ಹೋಗಿದ್ದು ಏಕೆ? ಎಂದು ಪ್ರಶ್ನೆ ಮಾಡಿದ್ದಾರೆ. 

ಮಹಾರಾಷ್ಟ್ರದ ಜಿಜೆಪಿ ಸರ್ಕಾರ ಈ ಅನರ್ಹ ಶಾಸಕರಿಗೆ ರಕ್ಷಣೆ  ಒದಗಿಸಿತ್ತು. ಇಷ್ಟೆಲ್ಲಾ ಆದರೂ ಅವರ ರಾಜೀನಾಮೆ ಹಿಂದೆ ಯಾವ ದುರುದ್ಧೇಶವಿರಲಿಲ್ಲ ಎಂದು ನಂಬುವುದಾದರೂ ಹೇಗೆ? ಬಿಜೆಪಿ ಜೊತೆ ಸೇರಿ ಸರ್ಕಾರ  ಬೀಳಿಸುವ ಹುನ್ನಾರ ಮಾಡಿರುವುದು ಇದರಿಂದ ಸ್ಪಷ್ಟವಾಗಿದೆ ಎಂದೂ  ಕಪಿಲ್ ಸಿಬಲ್ ವಾದಿಸಿದರು.

ನಿನ್ನೆ ಹಾಲಿ ಸ್ಪೀಕರ್ ಕಾಗೇರಿ ಪರ ವಾದ ಮಂಡಿಸಿದ ತುಷಾರ್ ಮೆಹ್ತಾ ಅವರು, ಈ ಪ್ರಕರಣದ ಬಗ್ಗೆ ಹೊಸದಾಗಿ ತೀರ್ಮಾನ ಕೈಗೊಳ್ಳಲು ಅವಕಾಶವಿದೆ ಮತ್ತು ಅನರ್ಹ ಶಾಸಕರನ್ನು ಮರು ವಿಚಾರಣೆ ನಡೆಸಿ, ಹೊಸ ನಿರ್ಧಾರ ತೆಗೆದುಕೊಳ್ಳಲು ಹಾಲಿ ಸ್ಪೀಕರ್ ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದರು.

ಮಾಜಿ ಸ್ಪೀಕರ್ ತೀರ್ಮಾನವನ್ನು ಮರುಪರಿಶೀಲನೆಗೆ ಕಳುಹಿಸಬಹುದಾಗಿದೆ. ಶಾಸಕರು ನೀಡಿದ ರಾಜೀನಾಮೆಯನ್ನು ತಿರಸ್ಕರಿಸಲು ಸ್ಪೀಕರ್ ಅವರಿಗೆ ಯಾವುದೇ ಕಾರಣಗಳಿರಲಿಲ್ಲ. ಹಾಗಾಗಿ ಈ ಪ್ರಕರಣವನ್ನು ಮರು ಪರಿಶೀಲನೆಗೆ ಕಳುಹಿಸಬಹುದಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಸತತ ಮೂರು ದಿನಗಳ ಕಾಲ ನಡೆದ ವಾದ - ಪ್ರತಿ ವಾದದ ಬಳಿಕ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದ್ದು, ದೀಪಾವಳಿ ರಜೆಯ ನಂತರ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ.

ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ ಅವರು ಕಾಂಗ್ರೆಸ್ ನ 14 ಹಾಗೂ ಜೆಡಿಎಸ್‌ನ 3 ಶಾಸಕರನ್ನು ಅನರ್ಹಗೊಳಿಸಿದ್ದರು. ಇದನ್ನು ಪ್ರಶ್ನಿಸಿ 17 ಅನರ್ಹ ಶಾಸಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದೇಶ ಹಿಂಸಾಚಾರ: ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ: ICT ತೀರ್ಪು

Delhi Blast: 'ವೈಟ್ ಕಾಲರ್' ಉಗ್ರ ಜಾಲ: ಹರಿಯಾಣದ ವೈದ್ಯೆ ಪ್ರಿಯಾಂಕಾ ಶರ್ಮಾ ವಿಚಾರಣೆ, ಯಾರು ಈಕೆ?

ಮಹಾಯುತಿಯಲ್ಲಿ ಬಿರುಕು: ಶರದ್ ಪವಾರ್ ಎನ್‌ಸಿಪಿ ಜತೆ ಶಿಂಧೆ ಶಿವಸೇನೆ ಮೈತ್ರಿ!

ಶೂನ್ಯ ರೇಬಿಸ್ ಸಾವುಗಳ ಬಗ್ಗೆ ಕೇಂದ್ರದಿಂದ ಸುಳ್ಳು ಮಾಹಿತಿ?!: RTI ಹೇಳ್ತಿರೋದೇ ಬೇರೆ ಕತೆ!

"ನನಗೆ ಚಿಂತೆಯೇ ಇಲ್ಲ. ಅಲ್ಲಾಹ್ ಜೀವ ಕೊಟ್ಟಿದ್ದಾನೆ.. ಅವನೇ ತೆಗೆದುಕೊಳ್ಳುತ್ತಾನೆ": ಕೋರ್ಟ್ ತೀರ್ಪಿಗೂ ಮೊದಲು ಶೇಖ್ ಹಸೀನಾ!

SCROLL FOR NEXT