ದೇಶ

ಸರ್ಕಾರ ರಚನೆಗೆ ಬೆಂಬಲ ನೀಡುವಂತೆ ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷಗಳಿಂದ ಆಹ್ವಾನ ಬಂದಿದೆ: ಜೆಜೆಪಿ 

Sumana Upadhyaya

ನವದೆಹಲಿ: ಹರ್ಯಾಣ ರಾಜ್ಯ ವಿಧಾನಸಭೆಯಲ್ಲಿ ಸ್ವತಂತ್ರವಾಗಿ ಸರ್ಕಾರ ರಚಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಸ್ಪಷ್ಟ ಬಹುಮತ ಸಿಗದಿರುವುದರಿಂದ ತಮ್ಮ ಪಕ್ಷಕ್ಕೆ ಎರಡೂ ಕಡೆಯಿಂದ ಆಹ್ವಾನ ಬಂದಿದೆ ಎಂದು ಹರ್ಯಾಣದ ಜನನಾಯಕ ಜನತಾ ಪಕ್ಷ(ಜೆಜೆಪಿ) ಅಧ್ಯಕ್ಷ ಸರ್ದಾರ್ ನಿಶಾಂತ್ ಸಿಂಗ್ ಹೇಳಿದ್ದಾರೆ.


ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಾಯಕರು ನಮ್ಮನ್ನು ಕರೆದಿದ್ದಾರೆ. ನಮ್ಮ ಚುನಾಯಿತ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸಿ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದಿರುವುದರಿಂದ ರಾಜ್ಯದ ಜನತೆಯ ತೀರ್ಪು ಅವರ ವಿರುದ್ಧವಾಗಿದೆ ಎಂದೇ ಅರ್ಥ. ನಮ್ಮ ಶಾಸಕರ ಜೊತೆ ಚರ್ಚೆ ನಡೆಸಿ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕೆಂದು ತೀರ್ಮಾನಿಸುತ್ತೇವೆ ಎಂದು ದೆಹಲಿಯಲ್ಲಿಂದು ಸುದ್ದಿಗಾರರಿಗೆ ಹೇಳಿದರು.


ಇಂದೇ ಜನನಾಯಕ ಜನತಾ ಪಕ್ಷದ ಶಾಸಕರ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ನಿನ್ನೆ ಹೊರಬಂದ ಹರ್ಯಾಣ ವಿಧಾನಸಭಾ ಕ್ಷೇತ್ರ ಫಲಿತಾಂಶದಲ್ಲಿ ಜೆಜೆಪಿ 10 ಸ್ಥಾನಗಳನ್ನು ಗಳಿಸಿದೆ. ಬಿಜೆಪಿಗೆ 40 ಸ್ಥಾನಗಳು ಸಿಕ್ಕಿದ್ದು, ಕಾಂಗ್ರೆಸ್ ಗೆ 31 ಸ್ಥಾನಗಳು ಬಂದಿವೆ. 


ಇದಕ್ಕೂ ಮುನ್ನ ಇಂದು ಬೆಳಗ್ಗೆ ಮಾತನಾಡಿದ್ದ ಹರ್ಯಾಣ ಬಿಜೆಪಿ ಮುಖ್ಯಸ್ಥ ಸುಭಾಷ್ ಬರಾಲಾ, ಸ್ವತಂತ್ರ ಶಾಸಕರ ಬೆಂಬಲ ಪಡೆದು ಬಿಜೆಪಿ ಸರ್ಕಾರ ರಚಿಸಲಿದೆ. ಸ್ವತಂತ್ರ ಶಾಸಕರು ನಮ್ಮ ಕಡೆಗಿದ್ದಾರೆ. ಮನೋಹರ್ ಲಾಲ್ ಖಟ್ಟರ್ ಅವರ ನೇತೃತ್ವದಲ್ಲಿಯೇ ಸರ್ಕಾರ ರಚನೆಯಾಗಲಿದೆ. ಅವರು ಇಂದು ದೆಹಲಿಗೆ ಬಂದು ಚರ್ಚೆ ನಡೆಸಲಿದ್ದಾರೆ ಎಂದಿದ್ದರು.


40 ಸ್ಥಾನ ಗಳಿಸಿರುವ ಬಿಜೆಪಿಗೆ ಸರ್ಕಾರ ರಚಿಸಲು ಇನ್ನು 6 ಶಾಸಕರ ಬೆಂಬಲ ಬೇಕಿದೆ. 

SCROLL FOR NEXT