ದೇಶ

ಹರಿಯಾಣ: ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಖಟ್ಟರ್ ಆಯ್ಕೆ, ಅ.27ಕ್ಕೆ ಪ್ರಮಾಣವಚನ

Manjula VN

ಚಂಡೀಗಢ: ಮನೋಹರ್ ಲಾಲ್ ಖಟ್ಟರ್ ಅವರು ಅವಿರೋಧವಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಶನಿವಾರ ಆಯ್ಕೆಯಾಗಿದ್ದಾರೆ. 

ಖಟ್ಟರ್ ಅವರು ಹರಿಯಾಣ ರಾಜ್ಯದ ಶಾಸಕಾಂಗ ಪಕ್ಷದ ನಾಯಕರು ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಘೋಷಣೆ ಮಾಡಿದ್ದಾರೆ. 

ಶಾಸಕಾಂಗ ಪಕ್ಷದ ಸಭೆಯಲ್ಲಿ ರವಿಶಂಕರ್ ಪ್ರಸಾದ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಹಾಜರಿದ್ದರು. ಶಾಸಕ ಅನಿಲ್ ವಿಜ್ ಹಾಗೂ ಕಣ್ವಾರ್ ಪಾಲ್ ಸೇರಿದಂತೆ ಇನ್ನಿತರೆ ಬಿಜೆಪಿ ನಾಯಕರು ಖಟ್ಟರ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. 

ಶಾಸಕಾಂಗ ಪಕ್ಷದ ನಾಯಕರಾದ ಬಳಿಕ ಹರಿಯಾಣ ರಾಜ್ಯಪಾಲ ಸತ್ಯದೇವೋ ನರೈನ್ ಆರ್ಯ ಅವರನ್ನು ಖಟ್ಟರ್ ಭೇಟಿಯಾಗಲಿದ್ದು, ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. 

ಅ.27 ರಂದು ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ಹರಿಯಾಣ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. 

ವಿಧಾನಸಭಾ ಫಲಿತಾಂಶ ಹೊರಬಿದ್ದ ಬಳಿಕ ಜನನಾಯಕ್ ಜನತಾ ಪಕ್ಷ (ಜೆಜೆಪಿ)ಯೊಂದಿಗೆ ಕೈಜೋಡಿಸಿರುವ ಬಿಜೆಪಿ, ಹರಿಯಾಣದಲ್ಲಿ ಸರ್ಕಾರ ರಚನೆ ಮಾಡುತ್ತಿದೆ. 

ನಿನ್ನೆಯಷ್ಟೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಹರಿಯಾಣ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕರೇ ಇರಲಿದ್ದಾರೆ. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಥಳೀಯ ಪಕ್ಷಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದ್ದರು. ಸುದ್ದಿಗೋಷ್ಠಿಯಲ್ಲಿ ಜೆಜೆಪಿ ಮುಖ್ಯಸ್ಥ ದುಷ್ಯಂತ್ ಚೌಟಾಲಾ ಕೂಡ ಹಾಜರಿದ್ದರು

SCROLL FOR NEXT