ದೇಶ

ತಮಿಳುನಾಡು: ಸತತ ಕಾರ್ಯಾಚರಣೆ ಹೊರತಾಗಿಯೂ ಬೋರ್ ವೆಲ್ ಗೆ ಬಿದ್ದಿದ್ದ ಬಾಲಕ ಸುಜಿತ್ ಸಾವು!

Srinivasamurthy VN

ಚೆನ್ನೈ: 88 ಆಳದ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕನ ರಕ್ಷಣೆಗೆ ಕಳೆದ ಹಲವು ದಿನಗಳಿಂದ ನಡೆದಿದ್ದ ರಕ್ಷಣಾ ಕಾರ್ಯಾಚರಣೆ ವಿಫಲವಾಗಿದ್ದು, ಬಾಲಕ ಸುಜಿತ್ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ತಮಿಳುನಾಡಿನ ತಿರುಚಿನಾಪಳ್ಳಿ ಸಮೀಪ ಶುಕ್ರವಾರ ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಸುಜೀತ್ ವಿಲ್ಸನ್ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಸೋಮವಾರ ರಾತ್ರಿ 10.30ಕ್ಕೆ ಕೊಳವೆಬಾವಿಯಿಂದ ಕೆಟ್ಟ ವಾಸನೆ ಬರುತ್ತಿತ್ತು. ವೈದ್ಯರು, ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದರು. ಅಲ್ಲದೆ ಕಳೆದ 3 ದಿನಗಳಿಂದ ನಿರಂತರ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಬಾಲಕ ಸುಜಿತ್ ಸಾವನ್ನಪ್ಪಿದ್ದಾನೆ. ಕೊಳವೆಬಾವಿಯಲ್ಲಿ 88 ಅಡಿ ಆಳದಲ್ಲಿ ಬಾಲಕ ಸಿಲುಕಿದ್ದ. ಕಲ್ಮಣ್ಣು ಮತ್ತು ಮಳೆಯಿಂದಾಗಿ ಬಾಲಕನನ್ನು ರಕ್ಷಿಸುವ ಕಾರ್ಯ ವಿಫಲವಾಯಿತು.

ಪ್ರಸ್ತುತ ಸುಜಿತ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ.

ನಡುಕಟ್ಟುಪಟ್ಟಿ ಸಮೀಪ ಮನೆಯಲ್ಲಿ ಆಡುತ್ತಿದ್ದ ಮಗು ಶುಕ್ರವಾರ ಸಂಜೆ ಕೊಳವೆಬಾವಿಗೆ ಬಿದ್ದಿತ್ತು. ಮಗುವಿನ ರಕ್ಷಣೆಗೆ ಅಗ್ಮಿ ಶಾಮಕದಳ, ಪೊಲೀಸ್ ಇಲಾಖೆ, ವಿಪತ್ತು ನಿರ್ವಹಣಾ ಸಿಬ್ಬಂದಿಗಳು ಸೇರಿದಂತೆ ಹಲವು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಬಾಲಕ ಸುಜಿತ್ ಸುರಕ್ಷಿತವಾಗಿ ಹೊರಬರಲಿ ಎಂದು ಲಕ್ಷಾಂತರ ಪ್ರಾರ್ಥಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಹ ಮಗುವಿನ ಜೀವ ಉಳಿಯಲಿ ಎಂದು ಪ್ರಾರ್ಥಿಸಿದ್ದರು. 

SCROLL FOR NEXT