ದೇಶ

ಪೆಹ್ಲು ಖಾನ್, ಪುತ್ರರ ವಿರುದ್ದದ ಗೋ ಕಳ್ಳಸಾಗಣೆ ಕೇಸ್ ರದ್ದುಗೊಳಿಸಿದ ರಾಜಸ್ಥಾನ ಹೈಕೋರ್ಟ್

Lingaraj Badiger

ಜೈಪುರ್: 2017ರಲ್ಲಿ ರಾಜಸ್ಥಾನದ ಅಳ್ವಾರ್ ನಲ್ಲಿ ಗೋರಕ್ಷಕರಿಂದ ಹಲ್ಲೆಗೊಳಗಾಗಿ ಮೃತಪಟ್ಟ ಪೆಹ್ಲೂ ಖಾನ್ ಹಾಗೂ ಅವರ ಇಬ್ಬರು ಪುತ್ರರ ವಿರುದ್ಧ ಮತ್ತು ಲಾರಿ ಚಾಲಕನ ವಿರುದ್ಧ ಗೋ ಕಳ್ಳಸಾಗಣೆ ಆರೋಪದಡಿ ದಾಖಲಾಗಿದ್ದ ಕೇಸ್ ಅನ್ನು ರಾಜಸ್ಥಾನ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.

ಮೃತ ಪೆಹ್ಲೂ ಖಾನ್ ಹಾಗೂ ಪುತ್ರರ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ಪಂಕಜ್ ಭಂಡಾರಿ ನೇತೃತ್ವದ ಏಕ ಸದಸ್ಯ ಪೀಠ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಪ್ರಕರಣ ರದ್ದುಗೊಳಿಸಿ, ನಾಲ್ವರ ವಿರುದ್ಧ ರಾಜಸ್ಥಾನ ಪೊಲೀಸರು ಸಲ್ಲಿಸಿದ್ದ ಚಾರ್ಜ್‌ಶೀಟ್ ಅನ್ನು ತಿರಸ್ಕರಿಸಿದ್ದಾರೆ.

ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಲಾರಿ ಚಾಲಕ ಖಾನ್ ಮೊಹಮ್ಮದ್ ಹಾಗೂ ಪೆಹ್ಲು ಖಾನ್ ಅವರ ಪುತ್ರರು ಹೈಕೋರ್ಟ್ ಮೆಟ್ಟಿಲೇರಿದ್ದರು. 

ಏಪ್ರಿಲ್ 1, 2017ರಲ್ಲಿ ಹೈನುಗಾರಿಕೆ ನಡೆಸುತ್ತಿದ್ದ ಪೆಹ್ಲು ಖಾನ್ ಅಗತ್ಯ ಪರವಾನಿಗೆ ಪಡೆದು ಗೋವುಗಳನ್ನು ಮಾರುಕಟ್ಟೆಯಿಂದ ಮನೆಗೆ ಸಾಗಿಸುತ್ತಿದ್ದ ವೇಳೆ ಅಲ್ವಾರ್‌ನಲ್ಲಿ ದಾಳಿ ನಡೆದಿತ್ತು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೆಹ್ಲು ಖಾನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಸಾಯುವ ಮುನ್ನ ಎಲ್ಲಾ 6 ಆರೋಪಿಗಳ ಹೆಸರನ್ನೂ ಪೆಹ್ಲು ಖಾನ್ ಹೇಳಿದ್ದರು. 

ಈ ಸಂಬಂಧ ರಾಜಸ್ಥಾನ ಪೊಲೀಸರು ಎರಡು ಎಫ್ಐಆರ್ ಗಳನ್ನು ದಾಖಲಿಸಿದ್ದರು. ಒಂದು ದಾಳಿ ನಡೆಸಿದವರ ಮೇಲೆ ಮತ್ತೊಂದು ಗೋ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಪೆಹ್ಲು ಖಾನ್ ಹಾಗೂ ಆತನ ಕುಟುಂಬದ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಿಸಿದ್ದರು.

SCROLL FOR NEXT