ದೇಶ

ಸಂಚಾರಿ ನಿಯಮ ಉಲ್ಲಂಘನೆ: ಆಟೋ ಚಾಲಕನಿಗೆ 47,500 ರೂ ದಂಡ! 

Srinivas Rao BV

ಭುವನೇಶ್ವರ್: ಸಂಚಾರಿ ನಿಯಮ ಉಲ್ಲಂಘನೆ ಮಾಡಿರುವ ಆಟೋ ಚಾಲಕನಿಗೆ ಮೋಟಾರು ವಾಹನಗಳ ಕಾಯ್ದೆ (ತಿದ್ದುಪಡಿ) ಅನ್ವಯ  47,500 ರೂಪಾಯಿ ದಂಡ ವಿಧಿಸಿರುವ ಘಟನೆ ಭುವನೇಶ್ವರದಲ್ಲಿ ನಡೆದಿದೆ. 

ಗುರುಗ್ರಾಮದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ ಆಟೋ ಚಾಲಕನಿಗೆ 32,500 ರೂಪಾಯಿ ದಂಡ ವಿಧಿಸಿದ್ದ ಪ್ರಕರಣದ ಬೆನ್ನಲ್ಲೇ ಭುವನೇಶ್ವರದಲ್ಲಿ ಈ ಘಟನೆ ನಡೆದಿದೆ. 

ಸೆ.1 ರಿಂದ ಹೊಸದಾಗಿ ಜಾರಿಗೆ ಬಂದಿರುವ ಮೋಟಾರು ವಾಹನ ಕಾಯ್ದೆಯ ಪ್ರಕಾರ ವಿಧಿಸಲಾಗಿರುವ ಅತಿ ಗರಿಷ್ಠ ಮೊತ್ತದ ಮೊದಲ ದಂಡ ಇದಾಗಿದೆ. 

ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಭುವನೇಶ್ವರದ ಆಟೋ ಚಾಲಕ ಹದಿಬಂಧು ಕನ್ಹರ್ ನ್ನು ಆರ್ ಟಿಒ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಇದೇ ವೇಳೆ ಆತನ ಮತ್ತಷ್ಟು ಅಪರಾಧಗಳು ಬೆಳಕಿಗೆ ಬಂದಿದೆ. 

ಮದ್ಯ ಸೇವನೆ ಮಾಡಿ ಚಾಲನೆ ಮಾಡಿದ್ದಕ್ಕಾಗಿ 10,000 ರೂಪಾಯಿ, ಪರಿಸರ ಮಾಲಿನ್ಯ ನಿಯಮ ಉಲ್ಲಂಘನೆಗೆ 10,000 ರೂಪಾಯಿ,  ಪರವಾನಗಿ ಇಲ್ಲದೇ ವಾಹನ ಚಾಲನೆ ಮಾಡಿ ಷರತ್ತುಗಳನ್ನು ಉಲ್ಲಂಘಿಸುವುದಕ್ಕೆ 5,000 ರೂಪಾಯಿ, ಫಿಟ್ನೆಸ್ ಪ್ರಮಾಣಪತ್ರ ಚಾಲನಾ ಪರವಾನಗಿ ಇಲ್ಲದೇ ಚಾಲನೆ ಮಾಡಿರುವುದಕ್ಕೆ 5,000 ರೂಪಾಯಿ, ಅನಧಿಕೃತ ವ್ಯಕ್ತಿಗೆ ವಾಹನ ಚಾಲನೆ ಮಾಡಲು ಅವಕಾಶ ನೀಡಿದ್ದಕ್ಕೆ 2,000 ರೂಪಾಯಿ ದಂಡ ವಿಧಿಸಲಾಗಿದೆ. 

ನಾನು ಯಾವುದೇ ಅಪರಾಧ ಮಾಡಿಲ್ಲ, ಕಳ್ಳತನವಾಗುವ ಭಯದಿಂದ ವಾಹನದಲ್ಲಿ ದಾಖಲೆಗಳನ್ನು ಇಟ್ಟಿರಲಿಲ್ಲ. ಮನೆಯಲ್ಲಿ ಎಲ್ಲಾ ದಾಖಲೆಗಳನ್ನೂ ಇಟ್ಟಿದ್ದೇನೆ ಬಿಟ್ಟರೆ ತಂದುಕೊಡುತ್ತೇನೆ ಎಂದಿರುವ ಚಾಲಕ ಚಾಲನೆ ವೇಳೆ ಮದ್ಯಪಾನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.

SCROLL FOR NEXT