ದೇಶ

ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್‌ ರೈಲಿನ ಪ್ರಯಾಣ ದರ 3000 ರೂ.

Lingaraj Badiger

ನವದೆಹಲಿ: ದೇಶದ ಪ್ರಥಮ ಬುಲೆಟ್ ರೈಲು ಮುಂಬೈ ಹಾಗೂ ಅಹಮದಾಬಾದ್ ನಡುವೆ ಸಂಚರಿಸಲಿದ್ದು, ರೈಲಿನ ಪ್ರಯಾಣ ದರ ಸುಮಾರು 3000 ರೂಪಾಯಿ ಆಗುತ್ತದೆ ಎಂದು ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಶನ್ ಲಿಮಿಟೆಡ್(ಎನ್ಎಚ್ಎಸ್ಆರ್ ಸಿಎಲ್) ನ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಮುಂಬೈ ಹಾಗೂ ಅಹಮದಾಬಾದ್ ನಡುವೆ 508 ಕಿ.ಮೀ ಅಂತರವಿದ್ದು, ಈ ಮಾರ್ಗ ನಿರ್ಮಾಣಕ್ಕೆ ಒಟ್ಟು 1,380 ಹೆಕ್ಟೆರ್ ಭೂಮಿಯ ಅಗತ್ಯ ಇದೆ. ಈಗಾಗಲೇ ಶೇ.45ರಷ್ಟು ಅಂದರೆ 622 ಹೆಕ್ಟೆರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಎನ್ಎಚ್ಎಸ್ಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಚಲ್ ಖರೆ ಅವರು ಹೇಳಿದ್ದಾರೆ.

ಮುಂಬೈ-ಅಹಮದಾಬಾದ್ ನಡುವೆ ಬುಲೆಟ್ ರೈಲು ಪ್ರತಿನಿತ್ಯ 70 ಬಾರಿ ಸಂಚರಿಸಲಿದ್ದು, ಒಂದು ಕಡೆಯಿಂದ ಬೆಳಗ್ಗೆ 6ರಿಂದ 12 ಗಂಟೆಯವರೆಗೆ 35 ಬಾರಿ ಸಂಚರಿಸಲಿದೆ. ಪ್ರಯಾಣ ದರ ಸುಮಾರು  3 ಸಾವಿರ ರೂಪಾಯಿ ನಿಗದಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇನ್ನು ಈ ಮಾರ್ಗವಾಗಿ ಸಂಚರಿಸುವ ಬುಲೆಟ್ ರೈಲಿನ ವೇಗ ಮೊದಲ ಹಂತದಲ್ಲಿ ಗಂಟೆಗೆ 350 ಕಿ.ಮೀ ಇರಲಿದ್ದು, ನಂತರ 320ಕ್ಕೆ ಕಡಿತಗೊಳ್ಳಲಿದೆ.

ಈ ಮಾರ್ಗವಾಗಿ ಸಂಚರಿಸುತ್ತಿರುವ ತುರಂತೋ ರೈಲಿನ ಪ್ರಥಮ ದರ್ಜೆ ಎ.ಸಿ. ಬೋಗಿಯ ಒಂದು ಸೀಟಿಗೆ 2,200 ರುಪಾಯಿ ಪ್ರಯಾಣ ದರವಿದೆ.

SCROLL FOR NEXT