ದೇಶ

ಭಯೋತ್ಪಾದನೆ ಕಿತ್ತೊಗೆಯಲು, ಜಮ್ಮು-ಕಾಶ್ಮೀರ ಅಭಿವೃದ್ಧಿಗೆ ಪಣತೊಡಿ: ರಾಂಚಿಯಲ್ಲಿ ಪ್ರಧಾನಿ ಮೋದಿ ಕರೆ 

Sumana Upadhyaya

ರಾಂಚಿ: ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತೆಸೆದು ದೇಶದಲ್ಲಿ ಅಭಿವೃದ್ಧಿ ತರಲು ಎನ್ ಡಿಎ-2 ಸರ್ಕಾರ ಕಳೆದ 100 ದಿನಗಳಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.


ಅವರು ಇಂದು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿ ಜನರನ್ನುದ್ದೇಶಿಸಿ ಮಾತನಾಡಿದರು. ಸರ್ಕಾರದ ಹಲವು ಬಡವರ ಮತ್ತು ಬುಡಕಟ್ಟು ಜನಾಂಗದ ಪರವಾದ ದೊಡ್ಡ ದೊಡ್ಡ ಯೋಜನೆಗಳ ಚಾಲನೆಗೆ ರಾಂಚಿ ಆರಂಭ ಸ್ಥಳವಾಗಿದೆ ಎಂದರು.


ಭ್ರಷ್ಟಾಚಾರವನ್ನು ಬುಡದಿಂದ ಕಿತ್ತೊಗೆಯಲು, ನಿಯಂತ್ರಣದಲ್ಲಿಡಲು, ಮುಸ್ಲಿಂ ಸೋದರಿಯರ ಹಕ್ಕುಗಳಿಗಾಗಿ ಹೋರಾಡಲು ನಾವು ಪಣತೊಟ್ಟಿದ್ದೇವೆ. ಕೆಲವು ಭ್ರಷ್ಟರು ಈಗಾಗಲೇ ಜೈಲು ಸೇರಿದ್ದಾರೆ. ತಾವು ಕಾನೂನಿಗೆ ಮೀರಿದವರು ಎಂದು ಭಾವಿಸಿದವರು ಇಂದು ಜಾಮೀನಿಗಾಗಿ ಕೋರ್ಟ್ ಬಾಗಿಲು ತಟ್ಟುತ್ತಿದ್ದಾರೆ ಎಂದರು.


ಇನ್ನು ಕೇಂದ್ರದ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳ ಬಗ್ಗೆ ಮಾತನಾಡಿ, ಜಮ್ಮು-ಕಾಶ್ಮೀರ ಮತ್ತು ಲಡಾಕ್ ಅಭಿವೃದ್ಧಿಯ ಗುರಿ ಇಟ್ಟುಕೊಂಡಿದ್ದು ಅದಕ್ಕಾಗಿ ಎನ್ ಡಿಎ-2 ಸರ್ಕಾರದ ಮೊದಲ 100 ದಿನಗಳಲ್ಲಿ ಕೆಲಸ ಆರಂಭಿಸಿದ್ದೇವೆ ಎಂದರು.


ಜಾರ್ಖಂಡ್ ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ತಮಗೆ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. ಹೊಸ ಬಹು ಮೋಡಲ್ ಸರಕು ಟರ್ಮಿನಲ್ ನಿಂದ ಸಾಗಣೆ ಸುಲಭವಾಗಲಿದೆ ಎಂದರು.


ವಿಶ್ವದ ಅತಿದೊಡ್ಡ ಆರೋಗ್ಯ ಸೇವೆ ಯೋಜನೆಯಾದ ಆಯುಷ್ಮಾನ್ ಭಾರತ್ ಉದ್ಘಾಟನೆಯಾಗಿದ್ದು ಜಾರ್ಖಂಡ್ ನಲ್ಲಿ. ಇಂದು ವ್ಯಾಪಾರಿಗಳಿಗೆ ಮತ್ತು ರೈತರಿಗೆ ಅನುಕೂಲವಾಗುವ ಪಿಂಚಣಿ ಯೋಜನೆ ಕೂಡ ಆರಂಭವಾಗಿದ್ದು ಇಲ್ಲಿನ ಬಿರ್ಸಾ ಮುಂಡಾದಲ್ಲಿ ಎಂದು ನೆನಪಿಸಿಕೊಂಡರು.


ಇದಕ್ಕೂ ಮುನ್ನ ಜಾರ್ಖಂಡ್ ವಿಧಾನಸಭೆಯ ಹೊಸ ಕಟ್ಟಡವನ್ನು ಉದ್ಘಾಟಿಸಿ ಸಚಿವಾಲಯ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

SCROLL FOR NEXT