ದೇಶ

ಬೇಕಾ ಭಾರತಕ್ಕೆ ಒಂದೇ ಭಾಷೆ? ಅಮಿತ್ ಶಾ ಅವರಿಗೊಂದು ಬಹಿರಂಗ ಪತ್ರ

ವಿರೋಧ ಪಕ್ಷವಿಲ್ಲದ ನಿಮಗೆ ನೀವು ಮಾಡಿದ್ದೆಲ್ಲ ಸರಿ ಎನ್ನುವ ಜನ ಇದ್ದಾರೆ. ನನಗದರ ಚಿಂತೆಯಿಲ್ಲ. ನಿಮಗೆ ಜೈ ಅಂದವರಲ್ಲಿ ನಾನೂ ಒಬ್ಬ. ಆದರೆ ನೀವು ಮಾಡಿದ್ದೇಕೆಲ್ಲ ಜೈ ಅನ್ನುವ ಪೈಕಿ ಖಂಡಿತ ಅಲ್ಲ. ಸ್ವಲ್ಪ ಚರಿತ್ರೆ ಓದಿ. ಅಪ್ ಡೇಟ್ ಆಗಿ. ಹುಚ್ಚಾಟ ಮಾತ್ರ ಮಾಡೋಕ್ಕೆ ಹೋಗಬೇಡಿ.

ಡಿಯರ್ ಅಮಿತ್ ಷಾ ಜಿ,

ನಮಸ್ತೆ. ನೀವು ಕ್ಷೇಮವೆಂದು ಭಾವಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ನಿಮ್ಮ ಸರಕಾರ ತೆಗೆದುಕೊಳ್ಳುತ್ತಿರುವ ಹಲವಾರು ದಿಟ್ಟ ನಿರ್ಧಾರಗಳಿಗೆ ಮೊದಲು ನಿಮಗೆ ಅಭಿನಂದನೆ ತಿಳಿಸಲು ಇಚ್ಛಿಸುತ್ತೇನೆ. ನಿಮ್ಮ ಸರಕಾರ ಅತ್ಯಂತ ಅದೃಷ್ಟವಂತ ಸರಕಾರ ಅನ್ನಬೇಕೋ ಅಥವಾ ದುರಾದೃಷ್ಟ ಸರಕಾರ ಎನ್ನಬೇಕೋ ತಿಳಿಯುತ್ತಿಲ್ಲ. ಈ ಮಾತು ಹೇಳಲು ಬಹು ಮುಖ್ಯ ಕಾರಣವೇನು ಗೊತ್ತೇ? ನಿಮ್ಮೆದುರು ವಿರೋಧ ಪಕ್ಷ ಎನ್ನುವುದು ಇಲ್ಲದೆ ಇರುವುದು. ಇದರಲ್ಲಿ ನಿಮ್ಮ ತಪ್ಪೇನೂ ಇಲ್ಲ ಬಿಡಿ. ನಾವು, ಅಂದರೆ ಭಾರತದ ಜನತೆ ನಿಮ್ಮಲ್ಲಿ ಅಷ್ಟೊಂದು ವಿಶ್ವಾಸವಿರಿಸಿದ್ದೇವೆ. ಆ ವಿಶ್ವಾಸ ಇಂದಿಗೂ ಅಚಲವಾಗಿದೆ. ಹೀಗಾಗಿ ವಿರೋಧ ಪಕ್ಷ ಎನ್ನುವುದೇ ಇಲ್ಲದ ಹಾಗೆ ನಿಮಗೆ ಒಂದಲ್ಲ ಎರಡು ಬಾರಿ ಬಹುಮತ ನೀಡಿದ್ದೇವೆ . 2024ಕ್ಕೂ ನಿಮಗೆ ಜೈ!! ನೀವು ತಪ್ಪು ಮಾಡದಿದ್ದರೆ!!! . ಅಮಿತ್ ಜಿ ನಿಮಗೊಂದು ಕತೆ ಹೇಳುತ್ತೀನಿ ಕೇಳುತ್ತೀರಾ?

ಒಂದೂರು ಆ ಊರಲ್ಲಿ ಹತ್ತು ಜನ ಸೇರಿ ತಮ್ಮದೇ ಆದ ಒಂದು ಸಂಘ ಕಟ್ಟಿಕೊಂಡಿದ್ದರು. ಅವರಲ್ಲಿ ಮೂರು ಜನಕ್ಕೆ ಉಪ್ಪಿಟ್ಟು ಬಹಳ ಇಷ್ಟ, ಇಬ್ಬರಿಗೆ ಇಡ್ಲಿ, ಇನ್ನೊಬ್ಬ ನಿಗೆ ಪಲಾವ್, ಮತ್ತೊಬ್ಬನಿಗೆ ಚಪಾತಿ, ಮಗದೊಬ್ಬನಿಗೆ ಪುಳಿಯೋಗರೆ! ಉಳಿದಿಬ್ಬರು ಹೊಟ್ಟೆ ತುಂಬುವುದಕ್ಕೆ ಏನಾದರೂ ಸರಿ ಎನ್ನುವ ಮನೋಭಾವದವರು. ಹೀಗಿರುವಾಗ ಉಪ್ಪಿಟ್ಟು ಇಷ್ಟ ಪಡುವ ಮೂವರಲ್ಲಿ ಒಬ್ಬ ನಮ್ಮಲ್ಲಿನ ಯುನಿಟಿ /ಒಗ್ಗಟ್ಟು ಊರಿಗೆಲ್ಲ ತೋರಿಸಬೇಕು ಅಂದರೆ ನಾವೆಲ್ಲಾ ಉಪಿಟ್ಟನ್ನೇ ತಿನ್ನಬೇಕು. ಅದು ನಮ್ಮನೆಲ್ಲ ಬೆಸೆಯುವ ಸಾಧನವಾಗಬೇಕು. ನಾವು ಒಬ್ಬಬ್ಬರು ಒಂದೊಂದು ತಿಂಡಿ ತಿನ್ನುವುದು ನಮ್ಮಲ್ಲಿನ ಏಕತೆ, ಒಗ್ಗಟ್ಟು ಇಲ್ಲ ಎನ್ನುವುದನ್ನ ತೋರಿಸುತ್ತೆ ಹೀಗಾಗಿ ಉಪ್ಪಿಟ್ಟನ್ನ ನಾವೆಲ್ಲರೂ ತಿನ್ನೋಣ ಎನ್ನುವ ಫರ್ಮಾನು ಹೊರಡಿಸಿದ!!.

ಈ ಕಥೆ ಕೇಳಿ ನಿಮಗೆ ನಗು ಬಂತಾ ಮೋಟಾ ಭಾಯ್? ಅಥವಾ ನೀವಾಡಿದ ಮಾತಿನ ರೀತಿಯೇ ಇದೆ ಅಂತ ಏನಾದ್ರೂ ಅನ್ನಿಸಿತಾ? ಇಲ್ಲ ಅಂದರೆ ಐ ಆಮ್ ರಿಯಲಿ ಸಾರೀ ಭಾಯ್. ಅಮಿತ್ ಭಾಯ್ #ಮೋದಿಮತ್ತೊಮ್ಮೆ ಅಂತ ತಿಂಗಳು ಗಟ್ಟಲೆ ಹಠಕ್ಕೆ ಬಿದ್ದವರಂತೆ ಕೆಲಸ ಮಾಡಿದ ಸಹಸ್ರಾರು ಸಾಮಾನ್ಯ ಪ್ರಜೆಗಳಲ್ಲಿ ನಾನೂ ಒಬ್ಬ. ಹೆಚ್ಚಿನದೇನೂ ಮಾಡದ ಆದರೆ ಮೋದಿಮತ್ತೊಮ್ಮೆ ಅಭಿಯಾನಕ್ಕೆ ಜೈ ಎಂದು ಅಳಿಲ ಸೇವೆ ಸಲ್ಲಿಸಿದ ಲಕ್ಷಾಂತರ ಸ್ವಯಂಪ್ರೇರಿತ ಜನರ ಗುಂಪಿನಲ್ಲಿ ನನ್ನದೂ ಒಂದು ದನಿಯಿತ್ತು. ಇಷ್ಟೆಲ್ಲಾ ಪೀಠಿಕೆ ಏಕೆ ಗೊತ್ತಾ ಅಮಿತ್ ಭಾಯ್? ನಿಮ್ಮ ಮೇಲೆ ಇಂದಿಗೂ ಅದೇ ಪ್ರೀತಿ ಇದೆ ಎನ್ನುವುದನ್ನ ಹೇಳಲು . ೩೭೦ ಕಿತ್ತೆಸೆದ ದಿನವೇ ನೀವು ನಮ್ಮ ಜನರ ಮನೆ ಮನದಲ್ಲಿ ನೆಲೆಸಿ ಬಿಟ್ಟಿರಿ. ಆದರೆ ಅಮಿತ್ ಭಾಯ್ ಎಚ್ಚರವಿರಲಿ!! ನಾವು ಕನ್ನಡಿಗರು ನಮ್ಮ ಮನೆಯಂಗಳದಲ್ಲಿ ಕೊಚ್ಚೆ ಮಾಡುವ ಸಾಹಸ ಮಾತ್ರ ಮಾಡಬೇಡಿ. ನಮ್ಮ ದೇಶ ಪ್ರೇಮ ತೋರಿಸಲು ಎಲ್ಲರೂ ಉಪ್ಪಿಟ್ಟು ತಿನ್ನಬೇಕು ಎನ್ನುವ ಫರ್ಮಾನು ಹೊರಡಿಸುವ ಮೂರ್ಖತನದ ಮಾತು ಮಾತ್ರ ಆಡಬೇಡಿ.

ಭಾರತ ಭಾರತವಾಗಿ ಉಳಿಯಬೇಕು. ಅಖಂಡ ಭಾರತದ ಪರಿಕಲ್ಪನೆಗೆ ಎಂದೆಂದೂ ನನ್ನ ಜೈಕಾರವಿದೆ. ಹಾಗೆಯೇ ಭಾರತ ವಿವಿಧತೆಯಲ್ಲಿ ಏಕತೆಯನ್ನ ಕಂಡ ರಾಷ್ಟ್ರ ಕೂಡ ಎನ್ನುವುದನ್ನ ಮರೆಯಬಾರದು.ಇಡೀ ಭಾರತಕ್ಕೆ ಒಂದೇ ಭಾಷೆ ದೇಶವನ್ನ ಬೆಸೆಯುವುದಕ್ಕೆ ಅಥವಾ ದೇಶ ಭಕ್ತಿ ಹೆಚ್ಚಿಸುವುದಕ್ಕೆ ಬೇಕು ಎನ್ನುವುದು ಎಲ್ಲರೂ ಉಪ್ಪಿಟ್ಟು ತಿನ್ನೋಣ ಎನ್ನುವಷ್ಟೇ ಹಾಸ್ಯಾಸ್ಪದ. ನಾವೆಲ್ಲಾ ನಮ್ಮ ನಮ್ಮ ಮಾತೃ ಭಾಷೆ ಮಾತಾಡಿಕೊಂಡೇ ರಾಷ್ಟ್ರೀಯತೆಯ ಭಾವದಲ್ಲಿ ಬದುಕಬಹದು.

ಅಮಿತ್ ಭಾಯ್ ನೀವು ಆಧುನಿಕ ಚಾಣಕ್ಯ ಎನ್ನುವ ಹೆಸರನ್ನ ಪಡೆದಿದ್ದೀರಿ . ನಿಮಗೆ ಹೆಚ್ಚಿಗೆ ಹೇಳುವ ಅಗತ್ಯ ನನಗಿಲ್ಲ . ಆದರೂ ಎರಡು ವಿಷಯ ನಿಮ್ಮಲ್ಲಿ ಆರಿಕೆ ಮಾಡಿಕೊಳ್ಳುತ್ತೇನೆ . ಈ ಎರಡೂ ವಿಷಯಕ್ಕೆ ಎಂದೂ ಕೈಯಿಡಲು ಹೋಗಬೇಡಿ ಪ್ಲೀಸ್ . ಹಾಗೊಮ್ಮೆ ಕೈ ಇಟ್ಟಿರಿ ಎಂದುಕೊಳ್ಳಿ ಕಾಂಗ್ರೆಸ್ ಮುಕ್ತ ದೇಶಕ್ಕೆ ಮತ್ತೆ ನೀವೇ ಕಾಂಗ್ರೆಸ್ ಮರಳಿ ಬರಲು ಅನುವು ಮಾಡಿಕೊಟ್ಟ ಹಾಗೆ ಆಗುತ್ತದೆ .

  1. ಭಾಷೆಯೇ ವಿಷಯದಲ್ಲಿ ನಿಮ್ಮ ಮೌನ ನಿಮಗೆ ವರ. ಸುಮ್ಮನಿರುವುದು ಕಲಿಯಿರಿ. ಮೊಘಲರು, ಬ್ರಿಟಿಷರು ಬಂದರೂ ನಮ್ಮ ಭಾಷೆಗಳು ಅಳಿಯಲಿಲ್ಲ ಏಕೆ? ಎನ್ನುವುದನ್ನ ಸ್ವಲ್ಪ ಅಧ್ಯಯನ ಮಾಡಿ ನೋಡಿ ಪ್ಲೀಸ್. ಅಮಿತ್ ಭಾಯ್ ನಿಮಗೆ ಗೊತ್ತೇ ಸ್ಪ್ಯಾನಿಶರು ವಸಹಾತು ನಿರ್ಮಿಸಿದ ಕಡೆಯೆಲ್ಲ ಅಲ್ಲಿನ ಸಂಸ್ಕೃತಿಯನ್ನ ಪೂರ್ಣವಾಗಿ ಅಳಿಸಿ ಅಲ್ಲೆಲ್ಲ ಸ್ಪ್ಯಾನಿಷ್ ಭಾಷೆಯನ್ನ ಕೂರಿಸಿದ್ದಾರೆ. ದಕ್ಷಿಣ ಅಮೆರಿಕಾದ 27 ದೇಶದಲ್ಲಿ ಸ್ಪ್ಯಾನಿಷ್ ಇಂದು ಆಡಳಿತ ಭಾಷೆ!! ಬ್ರಿಟಿಷರು, ಮೊಘಲರು ಕೂಡ ಹೋದಲೆಲ್ಲಾ ಗೆದ್ದರು. ಆದರೆ ಭಾರತ? ಅಲ್ಲಿನ ವಿವಿಧತೆಯನ್ನ ಛಿದ್ರ ಮಾಡಲು ಅವರಾರಿಗೂ ಸಾಧ್ಯವಾಗಲೇ ಇಲ್ಲ!! ನೀವು ಎಲ್ಲರಿಗೂ ಒಂದೇ ಭಾಷೆ ಎನ್ನುವ ದುಸ್ಸಾಹಸಕ್ಕೆ ಮಾತ್ರ ಕೈ ಹಾಕಬೇಡಿ. ಅದು ನಿಮ್ಮನ್ನ, ನಿಮ್ಮ ಪಕ್ಷವನ್ನ ದಹಿಸಿ ಬಿಡುತ್ತದೆ.
  2. ಜನರ ಬಳಿಯಿರುವ ಬಂಗಾರದ (ಗೋಲ್ಡ್ ) ಮೌಲ್ಯ ಸರಕಾರಕ್ಕೆ ಸೇರಿದರೆ ನಮ್ಮ ದೇಶ ಸೂಪರ್ ಪವರ್ ಆಗುತ್ತೆ . ಅಮೇರಿಕಾ ಸುಸು ಗೆ ಹೋಗುವ ಮುನ್ನ ಭಾರತದ ಅನುಮತಿ ಪಡೆಯುವ ಹಾಗೆ ಆಗುತ್ತೆ. ಇದು ಆರ್ಥಿಕತೆಯ ಬಗ್ಗೆ ಅಲ್ಪ ಸ್ವಲ್ಪ ಜ್ಞಾನವಿರುವವರಿಗೂ ತಿಳಿದ ವಿಷಯ. ಹುಷಾರು ಬಂಗಾರ ವೆನ್ನುವ ಹುತ್ತಕ್ಕೆ ಕೈ ಹಾಕಬೇಡಿ. ನಿಮ್ಮ ನಿಲುವು, ನಿಯತ್ತು ಸರಿಯಿರಬಹದು ಆದರೆ ಭಾಯ್ ಅದು ಕೂಡ ನೀವಿದ್ದೀರಿ ಎನ್ನುವುದನ್ನ ಕೂಡ ಮರೆಸುವ ಮಟ್ಟಿಗೆ ನಿಮ್ಮನ್ನ ಸುಡುತ್ತದೆ ಹುಷಾರು!.

ಭಾಯ್ ಇಷ್ಟೆಲ್ಲಾ ಭಾನುವಾರ ಬೆಳಿಗ್ಗೆ ಎದ್ದು ಆರಾಮಾಗಿ ಬುಕ್ ಮೈ ಶೋ ನಲ್ಲಿ ಯಾವುದಾದರೂ ಸಿನಿಮಾ ಬುಕ್ ಮಾಡಿ ನನ್ನ ಕುಟುಂಬದ ಜೊತೆ ಹೇಗೆ ಮಜಾ ಮಾಡಲಿ ಎನ್ನುವ ಯೋಚನೆ ಮಾಡದೆ ಇಷ್ಟುದ್ದ ಲೆಟರ್ ನಿಮಗೆ ಬರೆಯುವ ಉದ್ದೇಶ ನೀವು ಇದನ್ನ ಕೇಳುತ್ತೀರಿ , ಬದಲಾಗುತ್ತಿರಿ ಎನ್ನುವ ನಂಬಿಕೆಯಿಂದ. ನಂಬಿಕೆಯೇ ಕಳೆದುಕೊಂಡಿದ್ದ, ನರಸತ್ತ ಭಾರತದ ಜನತೆಗೆ , ಹಿಂದೂ ಸಮಾಜಕ್ಕೆ ನೀವು ಮತ್ತು ನರೇಂದ್ರ ಭಾಯ್ ಆಶಾಕಿರಣದಂತೆ ಬಂದಿದ್ದೀರಿ. ನಮ್ಮ ನಂಬಿಕೆಗೆ ಚ್ಯುತಿ ಬರದಂತೆ ನೆಡೆದುಕೊಳ್ಳುತ್ತೀರಿ ಎನ್ನುವ ನಂಬಿಕೆ ನಾನಿನ್ನು ಕಳೆದುಕೊಂಡಿಲ್ಲ ಹೀಗಾಗಿ ಈ ಪತ್ರ.

ಎಲ್ಲಾ ಹಿಂದಿ ಭಾಷಿಕರ ಬಾಯಲ್ಲಿ ' ಕನ್ನಡ' ಎಂದು ಹೇಳಿಸಿ ಸಾಕು. ಅವರೇನೂ ಕನ್ನಡ ಕಲಿಯುವುದು ಬೇಡ. 'ಕನ್ನಡ್' ಎನ್ನುವ ಪದ ಕೇಳಿದಾಗೆಲ್ಲ ರಕ್ತ ಕುದಿಯುತ್ತೆ ಭಾಯ್. ನಮ್ಮ ಮನಸ್ಥಿತಿ ಬಗ್ಗೆಯೂ ಚೂರು ಯೋಚನೆ ಮಾಡಿ ಭಾಯ್.

ಇನ್ನೊಂದು ಲೈನ್ ಅಷ್ಟೇ ಜಾಸ್ತಿ ಬರೆಯೋಲ್ಲ ಅಮಿತ್ ಭಾಯ್. ನನಗೆ ಭಾಷೆಯೆಂದರೆ ಅದೊಂದು ಸಂವಹನ ಮಾಧ್ಯಮ ಅಷ್ಟೇ. ಹೊಟ್ಟೆಪಾಡಿಗಾಗಿ ಸಾವಿರಾರು ಮೈಲಿ ದೇಶ ಬಿಟ್ಟು ಹೋಗಿ ಸ್ಪ್ಯಾನಿಷ್, ಪೋರ್ಚುಗೀಸ್ ಕಲಿಯುವ ನನಗೆ ಹಿಂದಿ ಕಲಿಯಲು ಯಾವ ಸಂಕೋಚ ಅಥವಾ ಆತ್ಮ ಸಮ್ಮಾನ ಅಡ್ಡಿ ಬರುವುದಿಲ್ಲ. ಆದರೆ ಆ ಭಾಷೆ ನಮ್ಮ ಒಗ್ಗಟ್ಟು, ಅಥವಾ ನಮ್ಮ ಬೆಸೆಯಲು ಅವಶ್ಯಕ ಎಂದರೆ ಮಾತ್ರ ಅದನ್ನ ಒಪ್ಪಲು ಸಿದ್ಧನಿಲ್ಲ.

ವಿರೋಧ ಪಕ್ಷವಿಲ್ಲದ ನಿಮಗೆ ನೀವು ಮಾಡಿದ್ದೆಲ್ಲ ಸರಿ ಎನ್ನುವ ಜನ ಇದ್ದಾರೆ. ನನಗದರ ಚಿಂತೆಯಿಲ್ಲ ಭಾಯ್. ನಿಮಗೆ ಜೈ ಅಂದವರಲ್ಲಿ ನಾನೂ ಒಬ್ಬ. ಆದರೆ ನೀವು ಮಾಡಿದ್ದೇಕೆಲ್ಲ ಜೈ ಅನ್ನುವ ಪೈಕಿ ಖಂಡಿತ ಅಲ್ಲ. ಭಾಯ್ ಸ್ವಲ್ಪ ಚರಿತ್ರೆ ಓದಿ. ಅಪ್ ಡೇಟ್ ಆಗಿ. ಹುಚ್ಚಾಟ ಮಾತ್ರ ಮಾಡೋಕ್ಕೆ ಹೋಗಬೇಡಿ.

ವಿಶ್ವಾಸದೊಂದಿಗೆ
ರಂಗಸ್ವಾಮಿ ಮೂಕನಹಳ್ಳಿ

muraram@yahoo.com

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ, ಹೇಗೆ ನೆರವೇರಿಸಿದ್ರು?ಈ ಅದ್ಭುತ Video ನೋಡಿ..

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

SCROLL FOR NEXT