ದೇಶ

ಆರ್ಥಿಕತೆ ಬಗ್ಗೆ ಸಚಿವರುಗಳು ವಿಲಕ್ಷಣ ಹೇಳಿಕೆ ನೀಡುತ್ತಿದ್ದಾರೆ; ಯಶವಂತ ಸಿನ್ಹಾ 

Sumana Upadhyaya

ಇಂದೋರ್ (ಮಧ್ಯ ಪ್ರದೇಶ): ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ದೇಶದ ಆರ್ಥಿಕತೆ ಬಗ್ಗೆ ವಿಲಕ್ಷಣ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆಗಳು ಆರ್ಥಿಕ ಬೆಳವಣಿಗೆಗೆ ಒಳ್ಳೆಯದಾಗುವುದಿಲ್ಲ. ಇದರಿಂದ ಸರ್ಕಾರದ ಇಮೇಜ್ ಗೆ ಧಕ್ಕೆಯುಂಟಾಗುತ್ತದೆ ಎಂದು ಬಿಜೆಪಿ ಮಾಜಿ ಹಿರಿಯ ನಾಯಕ ಯಶವಂತ್ ಸಿನ್ಹಾ ಟೀಕಿಸಿದ್ದಾರೆ.


ನಿನ್ನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ಬಗ್ಗೆ ಪ್ರಶ್ನಿಸಿದರು. ಆಟೊಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಾಣಲು ಕಾರಣ ಜನರು ಕಾರುಗಳನ್ನು ಖರೀದಿಸುವ ಬದಲು ಉಬರ್, ಒಲಾದಂತಹ ಸೇವೆಗಳನ್ನು ಬಳಸುತ್ತಿರುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಇಲ್ಲಿ, ನಿರ್ಮಲಾ ಸೀತಾರಾಮನ್ ಅವರ ಮಾತುಗಳನ್ನು ಒಪ್ಪುವುದಾದರೆ ದ್ವಿಚಕ್ರ ಮತ್ತು ಟ್ರಕ್ ಗಳ ಮಾರಾಟದಲ್ಲಿಯೂ ಇಳಿಕೆಯಾಗಲು ಹಾಗಾದರೆ ಏನು ಕಾರಣ ಎಂದು ಕೇಳಿದರು.


ಬಿಹಾರದ ಹಣಕಾಸು ಸಚಿವರಾದ ಸುಶಿಲ್ ಮೋದಿಯವರು ಮಳೆಗಾಲದಿಂದಾಗಿ ಇತ್ತೀಚೆಗೆ ಆರ್ಥಿಕ ಕುಸಿತವುಂಟಾಗಿದೆ ಎನ್ನುತ್ತಾರೆ. ಇನ್ನು ಮತ್ತೊಬ್ಬ ಕೇಂದ್ರ ಸಚಿವ ಪಿಯೂಷ್ ಗೋಯಲ್ ಆರ್ಥಿಕತೆಗೆ ಐನ್ ಸ್ಟೈನ್ ನ ಗುರುತ್ವಾಕರ್ಷಣ ಸಿದ್ದಾಂತವನ್ನು ಹೋಲಿಸುತ್ತಾರೆ ಇವೆಲ್ಲ ವಿಲಕ್ಷಣ ಹೇಳಿಕೆಗಳಾಗಿವೆ, ವಾಸ್ತವ ಪರಿಸ್ಥಿತಿ ಬೇರೆಯದೇ ಇದೆ ಎಂದರು. 


ದೇಶದಿಂದ ರಫ್ತನ್ನು ಹೆಚ್ಚಿಸಲು ದುಬೈ ಶಾಪಿಂಗ್ ಉತ್ಸವದ ಮಾದರಿಯಲ್ಲಿ ಭಾರತದಲ್ಲಿ ಮೆಗಾ ಶಾಪಿಂಗ್ ಫೆಸ್ಟಿವಲ್ ಆಯೋಜಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿಕೆಯನ್ನು ಪ್ರಶ್ನಿಸಿದ ಸಿನ್ಹಾ. ದುಬೈ ಮತ್ತು ಭಾರತದ ಆರ್ಥಿಕತೆ ವಿಭಿನ್ನವಾಗಿದೆ. ನಮ್ಮಲ್ಲಿ ರೈತರ ಅಭಿವೃದ್ಧಿಯಾದರೆ ಮಾತ್ರ ಭಾರತದ ಆರ್ಥಿಕತೆ ಅಭಿವೃದ್ಧಿಯಾಗಬಲ್ಲದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಮ್ಮ ದೇಶದ ಜಿಡಿಪಿ ಈ ಸಮಯದಲ್ಲಿ ಶೇಕಡಾ 8ಕ್ಕೆ ಏರಿಕೆಯಾಗಬೇಕಾಗಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಶೇಕಡಾ 5ಕ್ಕೆ ಇಳಿದಿದೆ. ಶೇಕಡಾ 3ರಷ್ಟು ಇಳಿಕೆಯಾಗಿದೆ ಎಂದರೆ 6 ಲಕ್ಷ ಕೋಟಿ ರೂಪಾಯಿ ಮೊದಲ ತ್ರೈಮಾಸಿಕದಲ್ಲಿ ನಷ್ಟವಾಗಿದೆ ಎಂದರ್ಥ ಎಂದರು.


ಕೇಂದ್ರ ಸರ್ಕಾರ ಕೆಲವು ಸಾರ್ವಜನಿಕ ವಲಯ ಬ್ಯಾಂಕ್ ಗಳನ್ನು ವಿಲೀನಗೊಳಿಸಿದ ಬಗ್ಗೆ ಕೇಳಿದಾಗ, ವಿಲೀನಕ್ಕೆ ನನ್ನ ವಿರೋಧವಿಲ್ಲ. ಆದರೆ ಇದರಿಂದ ತಕ್ಷಣಕ್ಕೆ ಅದರಷ್ಟಕ್ಕೆ ಅನುತ್ಪಾದಕ ಆಸ್ತಿಗಳು ಕಡಿಮೆಯಾಗುವುದಿಲ್ಲ. ನಿರ್ದಿಷ್ಟ ಬ್ಯಾಂಕುಗಳ ಅಧಿಕಾರಿಗಳಿಗೆ ವಿಲೀನದಿಂದ ತೊಂದರೆಯಾಗಲಿದೆ ಎಂದರು.

SCROLL FOR NEXT