ದೇಶ

ಪೆರೊಲ್  ಅಂತ್ಯ: ರಾಜೀವ್ ಹತ್ಯೆ ಪ್ರಕರಣದ ಆರೋಪಿ ನಳಿನಿ ಮತ್ತೆ ಜೈಲಿಗೆ

Nagaraja AB

ಚೆನ್ನೈ: ಮದ್ರಾಸ್ ಹೈಕೋರ್ಟಿನಿಂದ ನೀಡಿದ್ದ 52 ದಿನಗಳ ಪೆರೊಲ್ ಅವಧಿ ಮುಗಿದ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಏಳು ಮಂದಿ ಆರೋಪಿಗಳಲ್ಲಿ ಒಬ್ಬರಾದ ನಳಿನಿ ಶ್ರೀ ಹರನ್ ಮತ್ತೆ ವೆಲ್ಲೂರಿನ ಕಾರಾಗೃಹದಲ್ಲಿ ಶರಣಾಗಿದ್ದಾರೆ.

ಮಗಳ ಮದುವೆ ಸಿದ್ದತೆ ಹಿನ್ನೆಲೆಯಲ್ಲಿ ನಳಿನಿ ಶ್ರೀಹರ್ ಅವರಿಗೆ ಪೆರೊಲ್ ನೀಡಲಾಗಿತ್ತು ಎಂದು ಆಕೆಯ ಪರ ವಕೀಲ ಪಿ ಪುಗಜಿಂತಿ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಜುಲೈ 25 ರಂದು 30 ದಿನಗಳ ಪೆರೊಲ್ ಮೇರೆಗೆ ಜೈಲಿನಿಂದ ಬಿಡುಗಡೆಯಾಗಿದ್ದರು. ಮತ್ತೆ ಆಕೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಆಗಸ್ಟ್ ವರೆಗೂ ಮೂರು ವಾರಗಳ ಕಾಲ ಪೆರೊಲ್ ಅವಧಿಯನ್ನು ವಿಸ್ತರಿಸಿಕೊಂಡಿದ್ದರು.

ಮತ್ತೆ ರಜೆ ಅವಧಿಯನ್ನು ವಿಸ್ತರಿಸಬೇಕೆಂದು ನಳಿನಿ ಮಾಡಿದ ಮನವಿಯನ್ನು ಹೈಕೋರ್ಟ್ ನಿರಾಕರಿಸಿತು. ಪೆರೊಲ್ ಅವಧಿಯಲ್ಲಿ ರಜೆ ವಿಸ್ತರಿಸಬೇಕೆಂದು ತಮಿಳುನಾಡು ಸರ್ಕಾರಕ್ಕೂ ಅವರು ಮನವಿ ಮಾಡಿಕೊಂಡಿದ್ದರು. 

27 ವರ್ಷಗಳಿಂದಲೂ  ವೆಲ್ಲೂರಿನ ಮಹಿಳೆಯರ ವಿಶೇಷ ಕಾರಾಗೃಹದಲ್ಲಿರುವ ನಳಿನಿ ಮಗಳ ಮದುವೆ ಸಿದ್ದತೆಗಾಗಿ ಆರು ತಿಂಗಳ ರಜೆಯನ್ನು ಕೇಳಿಕೊಂಡಿದ್ದರು. ಪ್ರಸ್ತುತ ಅತಿ ಹೆಚ್ಚಿನ ದಿನಗಳವರೆಗೂ 52 ದಿನಗಳ ಕಾಲ ರಜೆ ನೀಡಲಾಗಿತ್ತು.

  2016ರಲ್ಲಿ ಆಕೆಯ ತಂದೆ ಪಿ ಶಂಕರ ನಾರಾಯಣನ್ ಮೃತಪಟ್ಟಿದ್ದಾಗ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಕೇವಲ 12 ತಾಸುಗಳ ತುರ್ತು ರಜೆಯನ್ನು ನೀಡಲಾಗಿತ್ತು. ನಂತರ 16 ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 1 ದಿನದ ರಜೆ ನೀಡಲಾಗಿತ್ತು.  2004ರಲ್ಲಿ ಆಕೆಯ ಸಹೋದರನ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. 

ಸಾರ್ವಜನಿಕ ಶಾಂತಿಗೆ ಭಂಗ ತರದ ರೀತಿಯಲ್ಲಿ ಮಾಧ್ಯಮ, ರಾಜಕೀಯ ಪಕ್ಷಗಳೊಂದಿಗೆ ಸಂವಾದ ನಿರ್ಬಂಧ ಸೇರಿದಂತೆ 12 ಅಂಶಗಳ ಷರತ್ತಿನ ಆಧಾರದ ಮೇಲೆ ನಳಿನಿ ಅವರಿಗೆ ಪೆರೊಲ್ ನೀಡಲಾಗಿತ್ತು. 

SCROLL FOR NEXT