ದೇಶ

ಉತ್ತರ ಭಾರತೀಯರಿಗೆ ಅಪಮಾನ: ಕೇಂದ್ರ ಸಚಿವ ಗಂಗ್ವಾರ್ ವಿರುದ್ಧ ಪ್ರಕರಣ ದಾಖಲು

Nagaraja AB

ನವದೆಹಲಿ: ಉತ್ತರ ಭಾರತದಲ್ಲಿ ಗುಣಮಟ್ಟದ ಜನರ ಕೊರತೆಯಿದೆ ಎಂಬ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ವಿರುದ್ಧ ಬಿಹಾರದ ನ್ಯಾಯಾಲಯವೊಂದರಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಮುಜಾಪ್ಪರ್ ಪುರ್ ನ ಚೀಪ್ ಜ್ಯೂಡಿಷಿಯಲ್ ಮ್ಯಾಜಿಸ್ಟ್ರೇಟ್ ಸೂರ್ಯ ಕಾಂತ್  ತಿವಾರಿ ಪೀಠದ ಮುಂಭಾಗ ಸಾಮಾಜಿಕ ಕಾರ್ಯಕರ್ತ ತಮನ್ನಾ ಹಸ್ಮಿ ಎಂಬವರು ಸೋಮವಾರ ದೂರು ದಾಖಲಿಸಿದ್ದಾರೆ.

ಉತ್ತರ ಭಾರತದಲ್ಲಿ ಗುಣಮಟ್ಟದ ಜನರ ಕೊರತೆಯಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವರು ಹೇಳಿಕೆ ನೀಡುವ ಮೂಲಕ ಈ ಭಾಗದ ಜನರನ್ನು ಅವಮಾನ ಮಾಡಿದ್ದಾರೆ ಎಂದು ಹಸ್ಮಿ ದೂರಿನಲ್ಲಿ ತಿಳಿಸಿದ್ದಾರೆ. 

ಐಪಿಸಿ ಸೆಕ್ಷನ್ 295 ( ಯಾವುದೇ  ಧರ್ಮದ ಅಪಮಾನ) 405 ( ನಂಬಿಕೆ ಉಲ್ಲಂಘನೆ ಅಪರಾಧ) 153 ( ಹಿಂಸೆಗೆ ಪ್ರಚೋದನೆ) ಮತ್ತಿತರ ಸೆಕ್ಷನ್ ಗಳಡಿಯಲ್ಲಿ ಸಾಮಾಜಿಕ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ. ಸೆಪ್ಟೆಂಬರ್ 25 ರಂದು ಈ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇದೆ. 

ಶನಿವಾರ ಸ್ವಕ್ಷೇತ್ರ ಬರೈಲಿಯಲ್ಲಿ ಗಂಗ್ವಾರ್  ವಿವಾದಾತ್ಮಕ ಹೇಳಿಕೆ ನೀಡಿದ್ದರು. ನಂತರ ಯುವ ಜನಾಂಗದಲ್ಲಿನ ಕೌಶಲ್ಯ ಕೊರತೆ ಬಗ್ಗೆ ಆ ರೀತಿಯಲ್ಲಿ ಹೇಳಿಕೆ ನೀಡಿದ್ದಾಗಿ ಸಮರ್ಥಿಸಿಕೊಂಡಿದ್ದರು. ಅದಕ್ಕಾಗಿಯೇ ಕೇಂದ್ರ ಸರ್ಕಾರ ಕೌಶಲ್ಯಾಭಿವೃದ್ಧಿ ಸಚಿವಾಲಯವನ್ನು ಸ್ಥಾಪಿಸಿದೆ ಎಂದು ಸಮಜಾಯಿಸಿ ನೀಡಿದ್ದರು. 

SCROLL FOR NEXT