ದೇಶ

ದೇಶ ಪ್ರೀತಿಸದವರು ಹಿಂದಿ ವಿರೋಧಿಸುತ್ತಾರೆ: ಅಮಿತ್ ಶಾರ 'ಒಂದು ದೇಶ, ಒಂದು ಭಾಷೆ'ಗೆ ತ್ರಿಪುರ ಸಿಎಂ ಬೆಂಬಲ

Lingaraj Badiger

ಅಗರ್ತಲಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ 'ಒಂದು ದೇಶ, ಒಂದು ಭಾಷೆ' ಪರಿಕಲ್ಪನೆಗೆ ಬೆಂಬಲ ಸೂಚಿಸಿರುವ ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರು, ದೇಶವನ್ನು ಪ್ರೀತಿಸದವರು ಹಿಂದಿಯನ್ನು ವಿರೋಧಿಸುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸೋಮವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಿಪ್ಲಬ್ ಕುಮಾರ್ ಅವರು, ಜಪಾನ್, ರಷ್ಯಾ, ಜರ್ಮನಿ ಮತ್ತು ಫ್ರಾನ್ಸ್  ಇಂಗ್ಲಿಷ್ ಸಹಾಯವಿಲ್ಲದೆ ಅಭಿವೃದ್ಧಿ ಸಾಧಿಸಿವೆ. ದೇಶದ ಅಭಿವೃದ್ಧಿಗೆ ಇಂಗ್ಲಿಷ್ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಮಾಡುವುದಕ್ಕೆ ವಿರೋಧಿಸುವವರಿಗೆ ದೇಶದ ಮೇಲೆ ಪ್ರೀತಿ ಇಲ್ಲ. ದೇಶದ ಬಹುತೇಕ ಜನ ಹಿಂದಿ ಮಾತನಾಡುತ್ತಿರುವುದರಿಂದ ಹಿಂದಿ ರಾಷ್ಟ ಭಾಷೆಯಾಗಿ ಮಾಡುವ ನಿರ್ಧಾರಕ್ಕೆ ನನ್ನ ಬೆಂಬಲ ಇದೆ ಎಂದು ತ್ರಿಪುರ ಸಿಎಂ ಹೇಳಿದ್ದಾರೆ.

ಕಳೆದ ಶನಿವಾರ ನಡೆದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು 'ಒಂದು ದೇಶ, ಒಂದು ಭಾಷೆ' ಎಂಬ ಧ್ವನಿ ಎತ್ತಿದ್ದರು. ಇಡೀ ಜಗತ್ತು ಭಾರತವನ್ನು ಗುರುತಿಸಲು ಏಕಮಾತ್ರ ಭಾಷೆಯ ಅಗತ್ಯವಿದೆ. ಸದ್ಯಕ್ಕೀಗ ಇಡೀ ದೇಶವನ್ನು ಒಂದು ಭಾಷೆಯ ಅಡಿಯಲ್ಲಿ ಏಕತೆಗೊಳಿಸುವ ಶಕ್ತಿ ಹಿಂದಿ ಭಾಷೆಗೆ ಮಾತ್ರ ಇದೆ ಎಂದು ಟ್ವೀಟ್​ ಮಾಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು.

SCROLL FOR NEXT