ದೇಶ

ಭಾರತ-ಚೀನಾ ಸೇನಾ ಮಧ್ಯೆ ಚಕಮಕಿ ನಡೆದಿಲ್ಲ, ಮುಖಾಮುಖಿಯಾಗಿದೆಯಷ್ಟೇ: ಜೈಶಂಕರ್

Manjula VN

ನವದೆಹಲಿ: ಲಡಾಖ್"ನ ಪ್ಯಾಂಗಾಂಗ್ನಲ್ಲಿ ಭಾರತ ಹಾಗೂ ಚೀನಾ ಸೇನಾ ನಡುವೆ ಯಾವುದೇ ಚಕಮಕಿಗಳೂ ನಡೆದಿಲ್ಲ, ಸೇನೆಗಳು ಮುಖಾಮುಖಿಯಾಗಿವೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಮಂಗಳವಾರ ಹೇಳಿದ್ದಾರೆ. 
 
ಭಾರತ ಹಾಗೂ ಚೀನಾ ನಡುವೆ ನಡೆದಿದ್ದ ಮುಖಾಮುಖಿ ಪ್ರಕರಣ ಸುಖಾಂತ್ಯ ಕಂಡಿದೆ. ಗಡಿ ನಿಯಂತ್ರಣ ರೇಖೆ ವಿಚಾರದಲ್ಲಿ ಉಭಯ ರಾಷ್ಟ್ರಗಳ ಸೇನೆ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದರೆ, ಸೂಕ್ತ ರೀತಿಯಲ್ಲಿ ಪರಿಸ್ಥಿತಿ ನಿಭಾಯಿಸಿದ್ದೇವೆಂದು ಹೇಳಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಜಮ್ಮು ಮತ್ತು ಕಾಶ್ಮೀರದ ಲಡಾಖ್ ನಲ್ಲಿರುವ ಪ್ಯಾಂಗಾಂಗ್ ಸರೋವರದ ಬಳಿ ಭಾರತ ಮತ್ತು ಚೀನಾ ಸೇನೆ ನಡುವೆ ಸಂಘರ್ಷ ಏರ್ಪಟ್ಟಿತ್ತು ಎಂದು ವರದಿಗಳು ಕೇಳಿ ಬಂದಿದ್ದವು. 

ಪ್ಯಾಂಗಾಂಗ್ ಸರೋವರದ ಬಳಿ ವಾಸ್ತವಿಕ ಗಡಿ ರೇಖೆಯ ಬಳಿ ಭಾರತೀಯ ಸೇನೆ ಗಸ್ತು ತಿರುತ್ತಿದ್ದ ವೇಳೆ ಚೀನಾ ಸೈನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಉಭಯ ಸೇನೆಗಳ ನಡುವೆ ಸಂಘರ್ಷ ಏರ್ಪಟ್ಟು, ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಈ ವಾತಾವರಣ ಸಂಜೆಯವರೆಗೂ ಹಾಗೆಯೇ ಮುಂದುವರೆದಿತ್ತು. ಬಳಿಕ ಉಭಯ ಸೇನೆಗಳು ಹೆಚ್ಚುವರಿ ಸೈನಿಕರನ್ನು ಸ್ಥಳಕ್ಕೆ ಕರೆಸಿಕೊಂಡಿತ್ತು. ಸಂಜೆ ವೇಳೆಗೆ ಭಾರತ ಮತ್ತು ಚೀನಾ ಸೇನೆಯ ಅಧಿಕಾರಿಗಳು ಸಭೆ ನಡೆಸಿ, ಸಮಸ್ಯೆಯನ್ನು ಬಗೆಹರಿಸಿದ್ದರು. 

ಪ್ಯಾಂಗಾಂಗ್ ಸರೋವರದ ಬಳಿ ಈ ಹಿಂದೆ ಕೂಡ ಚೀನಾ ಇದೇ ರೀತಿ ಕ್ಯಾತೆ ತೆಗೆದಿತ್ತು. 2017ರ ಆಗಸ್ಟ್ 15ರಂದು ಚೀನಾ ಸೇನೆ ಭಾರತದ ಗಡಿಯೊಳಗೆ ಅತಿಕ್ರಮ ಪ್ರವೇಶ ಮಾಡಲು ಯತ್ನಿಸಿತ್ತು. ಈ ವೇಳೆ ಭಾರತೀಯ ಸೇನೆ ಚೀನಾ ಸೈನಿಕರನ್ನು ತಡೆದಿದ್ದರು. ಬಳಿಕ ಸ್ಥಳದಲ್ಲಿ ಉಭಯ ದೇಶಗಳ ಸೈನಿಕರು ಕಲ್ಲು ತೂರಾಟ ನಡೆಸಿದ್ದರಲ್ಲದೆ, ಪರಸ್ಪರ ತಳ್ಳಾಡಿಕೊಂಡಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 

SCROLL FOR NEXT