ದೇಶ

ಅನಿವಾಸಿಗಳಿಗೆ ಆಧಾರ್ ಕಾರ್ಡ್: 182 ದಿನಗಳ ಕಾಯುವಿಕೆ ಇನ್ನಿಲ್ಲ!

Raghavendra Adiga

ನವದೆಹಲಿ: ಅಧಿಕೃತ ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಯಾವುದೇ ಅನಿವಾಸಿ ಭಾರತೀಯರು (ಎನ್‌ಆರ್‌ಐ) ಅವರು ಭಾರತಕ್ಕೆ ಆಗಮಿಸಿದ 182 ದಿನ ಕಾಯದೆಯೂ ಆಧಾರ್‌ಗೆ ಅರ್ಜಿ ಸಲ್ಲಿಸಬಹುದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸುತ್ತಿದೆ.

ಈ ಅಧಿಸೂಚನೆ ಸಂಬಂಧ  ವಿಶಿಷ್ಟ ಗುರುತು ಸಂಖ್ಯೆ ಪ್ರಾಧಿಕಾರ (ಯುಐಡಿಎಐ) "ಭಾರತಕ್ಕೆ ಬಂದ ನಂತರ ಎನ್‌ಆರ್‌ಐಗೆ ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಲಿದ್ದಾರೆ"ಎಂದು ಸುತ್ತೋಲೆ ಹೊರಡಿಸಿದೆ.

ಅರ್ಜಿ ಸಲ್ಲಿಕೆ ವಿಧಾನಗಳು ಹೆಚ್ಚೆನೂ ಬದಲಾಗದೆ ಉಳಿಯಲಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಎನ್‌ಆರ್‌ಐಗಳು ಈಗ ಆಗಮನದ ನಂತರ ಅಷ್ಟೇ ಬೇಗ  ಬಯೋಮೆಟ್ರಿಕ್ ಐಡಿಗೆ ಅರ್ಜಿ ಸಲ್ಲಿಸಬಹುದು ಅಥವಾ ಪೂರ್ವ ನೇಮಕಾತಿಯನ್ನು ನಿಗದಿಪಡಿಸಿ ಹೀಗಾಗಿ 182 ದಿನಗಳ ಕಡ್ಡಾಯ ಕಾಯುವಿಕೆಯ ಅವಧಿ ಇಲ್ಲವಾಗುತ್ತದೆ. 

ಭಾರತೀಯ ಪಾಸ್‌ಪೋರ್ಟ್ ಅನ್ನು ಗುರುತಿನ ಪುರಾವೆ(ಐಡಿ ಪ್ರೂಫ್), ವಿಳಾಸದ ಪುರಾವೆ (ಪಿಒಎ) ಮತ್ತು ಜನ್ಮ ದಿನಾಂಕ ಪುರಾವೆಯಾಗಿ ಸ್ವೀಕರಿಸಲಾಗುತ್ತದೆ ಎಂದು ಯುಐಡಿಎಐ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಎನ್‌ಆರ್‌ಐಗಳ ಪಾಸ್‌ಪೋರ್ಟ್  ಭಾರತೀಯ ವಿಳಾಸವನ್ನು ಹೊಂದಿಲ್ಲದಿದ್ದರೆ, ಇತರ ಯಾವುದೇ ಯುಐಡಿಎಐ-ಅನುಮೋದಿತ ಪಿಒಎ ದಾಖಲೆಗಳನ್ನು ವಿಳಾಸದ ಪುರಾವೆಯಾಗಿ ಸಲ್ಲಿಸಲು ಅವರಿಗೆ ಅವಕಾಶ ನೀಡಲಾಗುವುದು

ಜುಲೈ 5 ರಂದು ತಮ್ಮ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ "ಭಾರತಕ್ಕೆ ಬಂದ ನಂತರ ಭಾರತೀಯ ಪಾಸ್‌ಪೋರ್ಟ್‌ಗಳೊಂದಿಗೆ ಅನಿವಾಸಿ ಭಾರತೀಯರಿಗೆ ಆಧಾರ್ ಕಾರ್ಡ್  ನಿಡಬೇಕೆಂದು ನಾನು ಪ್ರತಿಪಾದಿಸುವೆ " ಎಂದದ್ದನ್ನು ನಾವಿಲ್ಲಿ ಸ್ಮರಿಸಬಹುದು.

SCROLL FOR NEXT