ದೇಶ

ಭಾರತದಲ್ಲಿರುವ ಯಹೂದಿಗಳು, ಇಸ್ರೇಲಿಗರ ಮೇಲೆ ದಾಳಿ ನಡೆಸಲು ಅಲ್ ಖೈದಾ, ಐಎಸ್ ಸಂಚು: ಗುಪ್ತಚರ ದಳ

Nagaraja AB

ನವದೆಹಲಿ: ಸೆಪ್ಟೆಂಬರ್ ಹಾಗೂ ಆಕ್ಟೋಬರ್ ತಿಂಗಳ ರಜೆ ಅವಧಿಯಲ್ಲಿ ಭಾರತದಲ್ಲಿರುವ ಯಹೂದಿಗಳು ಹಾಗೂ ಇಸ್ರೇಲಿಗರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು ಅಲ್ ಖೈದಾ, ಇಸ್ಲಾಮಿಕ್ ಸ್ಟೇಟ್ ನಂತಹ ಅಂತಾರಾಷ್ಟ್ರೀಯ ಮಟ್ಟದ ಉಗ್ರ ಸಂಘಟನೆಗಳು ಸಂಚು ರೂಪಿಸಿವೆ ಎಂದು ಗುಪ್ತಚರ ದಳ ಎಚ್ಚರಿಕೆ ನೀಡಿದೆ. 

ಸಂಭಾವ್ಯ ದಾಳಿ ಕುರಿತು ಯಹೂದಿ ಸಮುದಾಯ ಹೆಚ್ಚಾಗಿ ನೆಲೆಸಿರುವ ರಾಜ್ಯಗಳಿಗೆ ಗುಪ್ತಚರ ದಳ ಎಚ್ಚರಿಕೆ ನೀಡಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ಮೂರು ಯಹೂದಿಗಳ ರಜೆ ಬರಲಿದೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 1ರವರೆಗೂ  ರೊಷ್ ಹಶನ್ಹ್ ( ಯಹೂದಿಗಳ ಹೊಸ ವರ್ಷಾಚರಣೆ) ಅಕ್ಟೋಬರ್8  ಮತ್ತು 9 ರಂದು  ಯೊಮ್ ಕಿಪ್ಪೂರ್  ಹಾಗೂ ಅಕ್ಟೋಬರ್  13ರಿಂದ 22ರವರೆಗೂ ಸುಕೊಟ್ ಆಚರಣೆ ಮಾಡಲಾಗುತ್ತದೆ. 

ನವದಹೆಲಿಯಲ್ಲಿರುವ ಇಸ್ರೇಲ್ ರಾಯಬಾರ ಕಚೇರಿ ಹಾಗೂ ಶಾಲೆಗಳು, ಹೋಟೆಲ್ ಗಳ ಮೇಲೆ ದಾಳಿ ನಡೆಸಲು ಉಗ್ರ ಸಂಘಟನೆಗಳು ರೂಪಿಸಿರುವ ಸಂಚಿನ ಬಗ್ಗೆ ಇತರ ರಾಷ್ಟ್ರಗಳಿಂದ ಗುಪ್ತ ಚರ ಇಲಾಖೆ ಮಾಹಿತಿ ಸಂಗ್ರಹಿಸಿರುವುದಾಗಿ ತಿಳಿಸಿರುವುದಾಗಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ರದ್ದತಿ ನಂತರ ಭಾರತವನ್ನು ಇಸ್ರೇಲ್ ಬೆಂಬಲಿಸಿದ್ದರಿಂದ ಆ ಸಮುದಾಯದ ಮೇಲೆ ದಾಳಿ ನಡೆಸಲು ಉಗ್ರ ಸಂಚು ರೂಪಿಸಿವೆ ಎಂಬಂತಹ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. 

ಸಂಭಾವ್ಯ ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಪೊಲೀಸರು ಹಾಗೂ ಸ್ಥಳೀಯ ಗುಪ್ತಚರ ಘಟಕಗಳಿಗೆ ಸೂಚನೆ ನೀಡಲಾಗಿದೆ. ಯಹೂದಿಗಳು , ಇಸ್ರೇಲಿಗರ ನಿವಾಸಗಳು, ಸಂಸ್ಥೆಗಳು, ದೆಹಲಿಯ ಚಾಬಾದ್ ಹೌಸ್ ಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

SCROLL FOR NEXT