ದೇಶ

370 ವಿಧಿ ರದ್ದತಿಗೆ ನಡುಗಿದ ಪಾಕ್: ಮೋದಿ, ಅಮಿತ್ ಶಾ, ದೋವಲ್ ಹತ್ಯೆಗೆ ಉಗ್ರರಿಂದ ಭಾರೀ ಸಂಚು!

Manjula VN

ನವದೆಹಲಿ: ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದರ ವಿರುದ್ಧ ಆಕ್ರೋಶಗೊಂಡಿರುವ ಪಾಕಿಸ್ತಾನ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆ ಭಾರತದಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದು, ಇದರಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಅಜಿತ್ ದೋವಲ್ ಅವರನ್ನು ಹತ್ಯೆ ಮಾಡಲು ಹೊಂಚು ಹಾಕಿದೆ ಎಂದು ವರದಿಗಳು ತಿಳಿಸಿವೆ. 

ತನ್ನ ಹಿಟ್ ಲಿಸ್ಟ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಹೆಸರುಗಳನ್ನು ಸೇರ್ಪಡೆಗೊಳಿಸಿರುವ ಉಗ್ರ ಸಂಘಟನೆ, ಭಾರೀ ಸಂಚು ರೂಪಿಸುತ್ತಿದೆ ಎಂದು ವರದಿಗಳು ತಿಳಿಸಿವೆ. 

ಭಾರತದಲ್ಲಿ ವಿಧ್ವಂಸಕ ಕೃತ್ಯವೆಸಗಲು ಉಗ್ರರು ಸಂಚು ರೂಪಿಸಿರುವ ಹಿನ್ನಲೆಯಲ್ಲಿ ಕಾಶ್ಮೀರಕ್ಕೆ ಹತ್ತಿರದಲ್ಲಿರುವ ಉತ್ತರ ಭಾರತದ ನಗರಗಳಲ್ಲಿ ಈಗಾಗಲೇ ಹೈಅಲರ್ಟ್ ಘೋಷಣೆ ಮಾಡಲಾಗಿದೆ. 

ಮೋದಿ, ಅಮಿತ್ ಶಾ ಹಾಗೂ ದೋವಲ್ ಮಾತ್ರವೇ ಅಲ್ಲದೆ, ಜಮ್ಮು, ಪಠಾಣ್ ಕೋಟ್, ಅಮೃತಸರ, ಜೈಪುರ, ಗಾಂಧಿನಗರ, ಕಾನ್ಪುರ, ಲಖನೌ ಸೇರಿದಂತೆ ಇನ್ನೂ 30 ನಗರಗಳಲ್ಲಿ ದಾಳಿ ನಡೆಸಲು ಜೈಷ್-ಇ-ಮೊಹಮ್ಮದ್ ಹೊಂಚು ಹಾಕಿದೆ ಎಂದು ತಿಳಿದುಬಂದಿದೆ. 

ಈ ಕುರಿತು ನಾಗರಿಕ ವಿಮಾನಯಾನದ ಭದ್ರತಾ ವಿಭಾಗಕ್ಕೆ ಪತ್ರವೊಂದು ಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. 

ಇದಕ್ಕೆ ಪುಷ್ಟಿ ನೀಡುವಂತೆ ಶ್ರೀನಗರ, ಆವಂತಿಪೋರ, ಜಮ್ಮು, ಪಠಾಣ್ ಕೋಟ್ ಹಾಗೂ ಹಿಂಡನ್ ನಲ್ಲಿರುವ ವಾಯುನೆಲೆಗಳ ಮೇಲೆ ಉಗ್ರರು ದಾಳಿ ನಡೆಸಬಹುದು. 8-10 ಉಗ್ರರಿರುವ ತಂಡ ದಾಳಿ ನಡೆಸಬಹುದು ಎಂದು ಗುಪ್ತಚರ ಇಲಾಖೆ ಕೂಡ ಎಚ್ಚರಿಕೆ ನೀಡುವೆ. ಈ ಹಿನ್ನಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಹಾಗೂ ಉತ್ತರಪ್ರದೇಶದಲ್ಲಿರುವ ವಾಯುನೆಲೆಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಈ ನಡುವೆ ಉಗ್ರ ಸಂಘಠನೆ ತನ್ನ ಹಿರಿಯ ಕಮಾಂಡರ್ ಮಾವಿಯಾ ಖಾನ್ ಎಂಬಾತನನ್ನು ಪಾಕಿಸ್ತಾನ-ಆಫ್ಘಾನಿಸ್ತಾನ ಗಡಿಗೆ ಕಳೆದ ತಿಂಗಳಿನಲ್ಲಿಯೇ ರವಾನಿಸಿದೆ. ಆತ ತಾಲಿಬಾನ್ ಹಾಗೂ ಹಕ್ಕಾನಿ ಜಾಲದ ಜೊತೆಗೆ ಸಂಪರ್ಕದಲ್ಲಿರಬಹುದು ಎಂದು ಭದ್ರತಾ ಸಂಸ್ಥೆಗಳು ಆಂತಕ ವ್ಯಕ್ತಪಡಿಸಿವೆ. 

ಇದೇ ವೇಳೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ ಸೋದರ ರೌಫ್ ಅಜ್ಗರ್ ಪಾಕಿಸ್ತಾನದ ಬಹವಾಲ್ ಪುರದಲ್ಲಿರುವ ತನ್ನ ಉಗ್ರಗಾಮಿ ಶಿಬಿರದಿಂದ 50 ಉಗ್ರರನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಲಾಂಚ್ ಪ್ಯಾಡ್ ಗಳಿಗೆ ಕರೆತಂದಿದ್ದಾನೆಂದು ವರದಿಗಳು ತಿಳಿಸಿವೆ. 

SCROLL FOR NEXT