ದೇಶ

ಭಾರತೀಯ ನೌಕಾ ಪಡೆಗೆ ಆನೆ ಬಲ: ಐಎನ್‌ಎಸ್ ಖಂಡೇರಿ ಜಲಾಂತರ್ಗಾಮಿ ಅಧಿಕೃತ ಸೇರ್ಪಡೆ

Srinivasamurthy VN

ಮುಂಬೈ: ಭಾರತೀಯ ನೌಕಾ ಪಡೆಗೆ ಮತ್ತೊಂದು ಆನೆ ಬಲ ಬಂದಾಂತಾಗಿದ್ದು, ಬಹು ನಿರೀಕ್ಷಿತ ಅತ್ಯಾಧುನಿಕ ಜಲಾಂತರ್ಗಾಮಿ ನೌಕೆ ಐಎನ್‌ಎಸ್ ಖಂಡೇರಿಯನ್ನು ನೌಕಾಪಡೆಗೆ ಸೇರ್ಪಡೆ ಮಾಡಲಾಗಿದೆ.

ದೇಶದ ಎರಡನೇ ಸ್ಕಾರ್ಪಿಯನ್‌ ಶ್ರೇಣಿಯ ಅತ್ಯಾಧುನಿಕ 'ಐಎನ್‌ಎಸ್‌ ಖಂಡೇರಿ' ಜಲಾಂತರ್ಗಾಮಿಯನ್ನು ನೌಕಾಪಡೆಗೆ ಅಧಿಕೃತವಾಗಿ ಸೇರ್ಪಡೆ ಮಾಡಲಾಗಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇಂದು ಅಧಿಕೃತವಾಗಿ ನೌಕಾಪಡೆಯ ಸೇವೆಗೆ ಐಎನ್ಎಸ್ ಖಂಡೇರಿಯನ್ನು ಸಮರ್ಪಿಸಿದ್ದಾರೆ. 

'ಐಎನ್‌ಎಸ್‌ ಖಂಡೇರಿ' ಜಲಾಂತರ್ಗಾಮಿಯು ಯುದ್ಧ ನೌಕೆಗಳನ್ನು ಹೊಡೆದುರುಳಿಸಬಲ್ಲ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದ್ದು, ದೇಶದ ಅತ್ಯುತ್ತಮ ಮತ್ತು ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಗಳಲ್ಲಿ ಒಂದಾಗಿದೆ. 350 ಮೀಟರ್ ಆಳದಲ್ಲಿ 50 ದಿನಗಳ ಕಾಲ ಗಸ್ತು ತಿರುಗುವ ಸಾಮರ್ಥ್ಯ ಹೊಂದಿರುವ ಈ ಅತ್ಯಾಧುನಿಕ ನೌಕೆಯು ತೇಲುವಾಗ 1,615 ಟನ್ ಮತ್ತು ಮುಳುಗಿದಾಗ 1,775 ಟನ್ ಸ್ಥಳಾಂತರಿಸುತ್ತದೆ. 67.5 ಮೀಟರ್ ಉದ್ದದ ಐಎನ್‌ಎಸ್ ಖಂಡೇರಿ ನಾಲ್ಕು ಎಂಟಿಯು ಡೀಸೆಲ್ ಎಂಜಿನ್ ಮತ್ತು 12ವೋಲ್ಟ್ 360 ಬ್ಯಾಟರಿ ಸೆಲ್‌ಗಳಿಂದ ನಿಯಂತ್ರಿಸಲ್ಪಡುತ್ತದೆ. ದಾಳಿಯ ಜಲಾಂತರ್ಗಾಮಿ ನೌಕೆ 37 ಕಿಮೀ ಪ್ರತಿ ಗಂಟೆ ವೇಗದಲ್ಲಿ (20ನಾಟಿಕಲ್) ಸಾಗರದಡಿಯಲ್ಲಿ ಚಲಿಸಬಹುದಾಗಿದ್ದು, ಮೇಲ್ಮೈಯಲ್ಲಿ ಅದರ ವೇಗವು 20 ಕಿಮೀ ಪ್ರತಿ ಗಂಟೆ (11ನಾಟಿಕಲ್) ಇರಲಿದೆ.

ಸಾಮಾನ್ಯವಾಗಿ ಜಲಾಂತರ್ಗಾಮಿಗಳ ಶಬ್ಧಗಳ ಆಧಾರದ ಮೇಲೆ ಶುತ್ರುಪಾಳಯದ ನೌಕೆಗಳು ಅವುಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತವೆ. ಆದರೆ ಐಎನ್ಎಸ್ ಖಂಡೇರಿ ಶಬ್ದ ರಹಿತ ಜಲಾಂತರ್ಗಾಮಿ ನೌಕೆಯಾಗಿದೆ. ಹೀಗಾಗಿ ಖಂಡೇರಿ ಅಷ್ಟು ಸುಲಭಕ್ಕೆ ಶತ್ರುಪಾಳದ ನೌಕೆಗಳ ಗುರಿಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಫ್ರಾನ್ಸ್‌ ಜತೆಗೆ 2005ರಲ್ಲಿ ತಂತ್ರಜ್ಞಾನ ವರ್ಗಾವಣೆ ಒಪ್ಪಂದದಡಿ 6 ಸ್ಕಾರ್ಪೀನ್‌ ದರ್ಜೆಯ ಜಲಾಂತರ್ಗಾಮಿಗಳ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಖಂಡೇರಿ ಜಲಾಂತರ್ಗಾಮಿ ಕೂಡ ಒಂದು. ಮುಂಬೈನ ಮಡಗಾವ್ ಡಾಕ್ ಯಾರ್ಡ್ ನಲ್ಲಿ ಈ ಜಲಾಂತರ್ಗಾಮಿಯನ್ನು ನಿರ್ಮಿಸಲಾಗಿದೆ. ಒಟ್ಟು 25,000 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 6 ಸ್ಕಾರ್ಪೀನ್‌ ದರ್ಜೆಯ ಜಲಾಂತರ್ಗಾಮಿ ನಿರ್ಮಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ ದೇಶದ ಮೊದಲ ಸ್ಕಾರ್ಪೀನ್ ದರ್ಜೆಯ ಐಎನ್‌ಎಸ್‌ ಕಲ್ವರಿ 2017ರಲ್ಲಿ ನೌಕಾಪಡೆ ಸೇರಿತ್ತು.

SCROLL FOR NEXT