ದೇಶ

ಕಾಶ್ಮೀರದಲ್ಲಿ ಸಂವಹನ ಜಾಲ ಪುನರ್ ಸ್ಥಾಪಿಸುವಂತೆ ಮೋದಿಗೆ ಅಮೆರಿಕಾ ಕಾಂಗ್ರೆಸ್ಸಿಗರ ಒತ್ತಾಯ  

Nagaraja AB

ನವದೆಹಲಿ: ಜಮ್ಮು- ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿ ಬಗ್ಗೆ ಭಾರತೀಯ ಮೂಲಕ ಅಮೆರಿಕಾದ ಚುನಾಯಿತ ಪ್ರತಿನಿಧಿ ಪ್ರಮೀಳಾ ಜೈಪಾಲ್ ಸೇರಿದಂತೆ ಇತರ 13 ಕಾಂಗ್ರೆಸ್ಸಿಗರು  ಕಳವಳ ವ್ಯಕ್ತಪಡಿಸಿದ್ದು, ಸಂವಹನ ಕಡಿತವನ್ನು ತೆರವುಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಜಮ್ಮು- ಕಾಶ್ಮೀರದಲ್ಲಿರುವ ಕುಟುಂಬದೊಂದಿಗೆ ದೇಶದ ಇತರ ಕಡೆಗಳಲ್ಲಿ ವಾಸಿಸುತ್ತಿರುವ  ಸಹಸ್ರಾರು ಕುಟುಂಬ ಸದಸ್ಯರು ಸಂಪರ್ಕ ಸಾಧಿಸದಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಂವಹನ ಜಾಲದ ಮೇಲಿನ ನಿರ್ಬಂಧವನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿರುವುದಾಗಿ ಜಂಟಿ ಹೇಳಿಕೆಯಲ್ಲಿ ಅಮೆರಿಕಾದ ಕಾಂಗ್ರೆಸ್ಸಿಗರು ತಿಳಿಸಿದ್ದಾರೆ. 

ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ ಜಮ್ಮ- ಕಾಶ್ಮೀರ ಹಾಗೂ ಲಡಾಖ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ ಆಗಸ್ಟ್ 5 ರಿಂದಲೂ ನಿರ್ಬಂಧ ಹೇರಲಾಗಿದೆ.

ಜಮ್ಮು- ಕಾಶ್ಮೀರದ ಜನತೆ ಕೂಡಾ ಇತರ ಭಾಗಗಳಲ್ಲಿನ ಜನರಂತೆ ತಮ್ಮ ಹಕ್ಕುಗಳನ್ನು ಅನುಭವಿಸುವ ಅಧಿಕಾರ ಹೊಂದಿದ್ದಾರೆ. ಭಾರತ ವಿಶ್ವದ ಅತ್ಯಂತ ದೊಡ್ಡ ಪ್ರಜಾಸತಾತ್ಮಕ ಹಾಗೂ ಅಮೆರಿಕಾದ ಪ್ರಮುಖ ಪಾಲುದಾರಿಕಾ ರಾಷ್ಟ್ರವಾಗಿದೆ. ಈ ನಂಬಿಕೆಯಿಂದಲೇ ಭಾರತ ಸರ್ಕಾರ ಕಣಿವೆ ರಾಜ್ಯದಲ್ಲಿ ಹೇರಿರುವ ನಿರ್ಬಂಧವನ್ನು ತೆರವುಗೊಳಿಸುವ ವಿಶ್ವಾಸ ಹೊಂದಿರುವುದಾಗಿ ಅವರು ಹೇಳಿದ್ದಾರೆ.

ಆಗಸ್ಟ್ 5 ರಿಂದಲೂ ಹಲವಾರು ರಾಜಕೀಯ ಮುಖಂಡರನ್ನು ಬಂಧಿಸಿ,  ಮೊಬೈಲ್ ಪೋನ್, ಇಂಟರ್ ನೆಟ್  ಮತ್ತಿತರ ಸಂಪರ್ಕ ಮಾಧ್ಯಮಗಳನ್ನು ಸ್ಥಗಿತಗೊಳಿಸಿರುವುದರಿಂದ ಅಮೆರಿಕಾ ಮತ್ತಿತರ ಕಡೆಗಳಲ್ಲಿ ವಾಸಿಸುತ್ತಿರುವ ಅವರ ಜಮ್ಮು- ಕಾಶ್ಮೀರದ ಕುಟುಂಬದ ಸದಸ್ಯರು ಸಂಪರ್ಕ ಸಾಧಿಸದಂತಾಗಿದೆ ಎಂದು ಅಮೆರಿಕಾ ಕಾಂಗ್ರೆಸ್ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

SCROLL FOR NEXT