ದೇಶ

ಸಂವಿಧಾನ ವಿಧಿ 370 ರದ್ದು: ಅ.1ರಿಂದ ಜಸ್ಟೀಸ್ ರಮಣ ನೇತೃತ್ವದ ಪೀಠದಿಂದ ಅರ್ಜಿ ವಿಚಾರಣೆ

Sumana Upadhyaya

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಿರ್ಣಯ ಪ್ರಶ್ನಿಸಿ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್ 1ರಂದು ಆರಂಭಿಸಲಿದೆ.

 
ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಅರ್ಜಿಗಳ ವಿಚಾರಣೆ ನಡೆಸಲಿದೆ. ಈ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಆರ್ ಸುಭಾಷ್ ರೆಡ್ಡಿ, ಬಿ ಆರ್ ಗವೈ ಮತ್ತು ಸೂರ್ಯ ಕಾಂತ್ ಇರುತ್ತಾರೆ.


ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಈಗಾಗಲೇ ಒಂದು ಭಾಗದ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದ್ದು ಮುಂದಿನ ವಿಚಾರಣೆಯನ್ನು ಇದೇ 30ಕ್ಕೆ ನಿಗದಿಪಡಿಸಿದೆ. 


ಕಳೆದ ತಿಂಗಳು ಸಂವಿಧಾನದ 370 ಮತ್ತು 35ಎ ವಿಧಿಯನ್ನು ರದ್ದುಪಡಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದೇ ವೇಳೆ ಸಂಸತ್ತಿನಲ್ಲಿ ಜಮ್ಮು-ಕಾಶ್ಮೀರ (ಪುನರ್ ವಿಂಗಡನೆ)ಕಾಯ್ದೆ 2019 ಅನುಮೋದನೆಗೊಂಡಿದೆ. ಈ ಮೂಲಕ ಜಮ್ಮು-ಕಾಶ್ಮೀರವನ್ನು ವಿಂಗಡನೆ ಮಾಡಿ ವಿಧಾನಸಭೆಯನ್ನು ಒಳಗೊಂಡ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದರೆ ಲಡಾಕ್ ಮತ್ತೊಂದು ಕೇಂದ್ರಾಡಳಿತ ಪ್ರದೇಶ ಎಂದು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. 


ಕೇಂದ್ರದ ಈ ನಡೆಗೆ ದೇಶದ ಒಂದು ವರ್ಗದ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕೆಲ ರಾಜಕೀಯ ಪಕ್ಷಗಳು ಕೂಡ ಇದನ್ನು ವಿರೋಧಿಸಿದೆ. ಸರ್ಕಾರದ ನಡೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿವೆ.

SCROLL FOR NEXT