ದೇಶ

ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಿಗರ ವೀಸಾ ರದ್ದು!

Srinivasamurthy VN

ನವದೆಹಲಿ: ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಿಗರ ವೀಸಾ ರದ್ದು ಮಾಡುವುದಾಗಿ ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಈ ಕುರಿತಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿದ್ದು, ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ವಿದೇಶಿಗರ ವೀಸಾ ರದ್ದು ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೆ ಇದೇ ವಿಚಾರವಾಗಿ ದೇಶದ ಎಲ್ಲ ರಾಜ್ಯಗಳ  ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದ್ದು, ಧಾರ್ಮಿಕಸಭೆಯಲ್ಲಿ ಪಾಲ್ಗೊಂಡಿದ್ದ 960 ವಿದೇಶಿಗರು ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಹಿನ್ನಲೆಯಲ್ಲಿ ಅವರ ವೀಸಾ ರದ್ದು ಮಾಡುವಂತೆ ಸೂಚಿಸಿದ್ದಾರೆ.

ಈ ಹಿಂದೆ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ 960 ವಿದೇಶಿಗರ ವೀಸಾವನ್ನು ಕಪ್ಪುಪಟ್ಟಿಗೆ ಸೇರಿಸಿತ್ತು. ಇದೀಗ ಎಲ್ಲ ವೀಸಾಗಳನ್ನೂ ರದ್ದು ಮಾಡಿ ಆದೇಶ ಹೊರಡಿಸಿದೆ.

9,000 ತಬ್ಲಿಗಿ ಜಮಾತ್ ಸದಸ್ಯರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ
ಇದೇ ವೇಳೆ ದೆಹಲಿ ನಿಜಾಮುದ್ದೀನ್ ಮಸೀದಿಯ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಸುಮಾರು 9,000 ಜಮಾತ್ ಸದಸ್ಯರನ್ನು ಮತ್ತು ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವವರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ದೆಹಲಿಯಲ್ಲಿ  2,000ದಷ್ಟು  ತಬ್ಲಿಗಿ ಜಮಾತ್ ಸದಸ್ಯರಿದ್ದು, 1,804 ಜನರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿದೆ. ಸೋಂಕು ಲಕ್ಷಣವಿರುವ 334 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಲಾ ಶ್ರೀವಾಸ್ತವ ಹೇಳಿದ್ದಾರೆ.

ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ತಬ್ಲಿಗಿ ಜಮಾತ್ ಸದಸ್ಯರನ್ನು ಪತ್ತೆ  ಹಚ್ಚುವ ಕಾರ್ಯಕ್ಕಾಗಿ ಆರೋಗ್ಯ ಸಚಿವಾಲಯ ಕಠಿಣ ಶ್ರಮವಹಿಸಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT