ದೇಶ

ನಾನೂ ಕ್ವಾರಂಟೈನ್ ನಲ್ಲಿದ್ದೇನೆ, ನೀವೂ ಸರ್ಕಾರದ ಆದೇಶ ಪಾಲಿಸಿ: ಅನುಯಾಯಿಗಳಿಗೆ ತಬ್ಲಿಘಿ ಜಮಾತ್ ಮುಖ್ಯಸ್ಥನ ಕರೆ

Manjula VN

ನವದೆಹಲಿ: ಸರ್ಕಾರದ ಆದೇಶದಂತೆ ನಾನೂ ಕೂಡ ಕ್ವಾರಂಟೈನ್ ನಲ್ಲಿದ್ದು, ನೀವೂ ಕೂಡ ಸರ್ಕಾರದ ಆದೇಶ ಪಾಲಿಸಿ ಎಂದು ತಮ್ಮ ಅನುಯಾಯಿಗಳಿಗೆ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ಅವರು ಗುರುವಾರ ಕರೆ ನೀಡಿದ್ದಾರೆ. 

ರಾಷ್ಟ್ರ ರಾಜಧಾನಿ ದೆಹಲಿಯ ನಿಜಾಮುದ್ದೀನ್ (ಬಂಗ್ಲೇವಾಲೆ) ಮಸೀದಿಯಲ್ಲಿ ತಬ್ಲೀಘಿ ಜಮಾತ್ ಸಂಘಟನೆ ಮಾರ್ಚ್ 1ರಿಂದ 15ರವರೆಗೆ ಧಾರ್ಮಿಕ ಸಭೆಯೊಂದನ್ನು ಹಮ್ಮಿಕೊಂಡಿದ್ದು, ಇದರಲ್ಲಿ ದೇಶ ವಿದೇಶಗಲ 8000ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಇವರ ಪೈಕಿ ಕೆಲವರಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿಗೆ ಆಗಮಿಸಿದ್ದವರನ್ನೆಲ್ಲಾ ಇದೀಗ ಪರೀಕ್ಷೆಗೆ ಗುರಿಪಡಿಸಲಾಗುತ್ತಿದೆ. ಅವರ ಪೈಕಿ ನೂರಾರು ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದಕ್ಕಿಂತ ಆತಂಕಕಾರಿ ವಿಚಾರವೆಂದರೆ ಇದೀಗ ಸೋಂಕು ಪತ್ತೆಯಾದವರು, ಕರ್ನಾಟಕ, ತಮಿಳುನಾಡು, ದೆಹಲಿ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಿಗೆ ತೆರಳಿದ್ದು, ಅಲ್ಲಿಯೂ ಇನ್ನಷ್ಟು ಜನರಿಗೆ ಸೋಂಕು ಹಬ್ಬಿಸಿರುವ ಭೀತಿ ಎದುರಾಗಿದೆ.

ಪ್ರಕರಣ ಸಂಬಂಧ ಈಗಾಗಲೇ ಕಾರ್ಯಕ್ರಮ ಆಯೋಜಿಸಿದ್ದ ಮಸೀದಿ 7 ಮಂದಿ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಜಮಾತ್ ಮುಖ್ಯಸ್ಥರ ವಿರುದ್ಧವೂ ಪ್ರಕರಣ ದಾಖಲಾಗಿದೆ. 

ಇದೀಗ ಕ್ವಾರಂಟೈನ್ ನಲ್ಲಿರುವ ತಬ್ಲಿಘಿ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್ ತಮ್ಮ ಅನುಯಾಯಿಗಳಿಗೆ ಆಡಿಯೋ ಸಂದೇಶವನ್ನು ನೀಡಿದ್ದು, ಸಂದೇಶದಲ್ಲಿ ವೈದ್ಯರ ಸಲಹೆ ಮೇರೆಗೆ ಇದೀಗ ನಾನು ಕ್ವಾರಂಟೈನ್ ನಲ್ಲಿದ್ದೇನೆ. ನೀವು ಕೂಡ ಸರ್ಕಾರದ ಆದೇಶ ಪಾಲನೆ ಮಾಡಿ ಎಂದು ಹೇಳಿರುವುದು ಕಂಡು ಬಂದಿದೆ. 

SCROLL FOR NEXT