ದೇಶ

ಲಾಕ್ ಡೌನ್ ವಿಚಾರದಲ್ಲಿ ಸೋನಿಯಾ ಗಾಂಧಿ ಟೀಕೆ ದುರದೃಷ್ಟಕರ: ಜಾವ್ಡೆಕರ್

Nagaraja AB

ನವದೆಹಲಿ: ಕೊರೋನಾ ವೈರಸ್ ನಿಯಂತ್ರಣ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಅನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಾಡಿರುವ ಟೀಕೆ ದುರದೃಷ್ಟಕರ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ

ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ಇಂತಹ ಹೇಳಿಕೆ ಅಸಂಗತವಾಗಿದ್ದು, ಈ ರೀತಿಯ ಟೀಕೆ ಟಿಪ್ಪಣಿಗಳಿಂದ ಕೊರೋನಾ ವಿರುದ್ಧ ಇಡೀ ದೇಶ ನಡೆಸುತ್ತಿರುವ ಸಮರ ನಿಲ್ಲದು ಎಂದರು.

ಕೊರೋನಾವೈರಸ್ ಯಾವುದೇ ಒಂದು ಜಾತಿ, ಧರ್ಮ, ಜನಾಂಗಕ್ಕೆ ಸೀಮಿತವಾಗಿಲ್ಲ. ಇದು ಎಲ್ಲರನ್ನೂ ಬಾಧಿಸುತ್ತಿರುವ ಸಮಸ್ಯೆ. ಇಂತಹ ಸವಾಲನ್ನು ಭಾರತ ಅತ್ಯುತ್ತಮವಾಗಿ ಎದುರಿಸುತ್ತಿರುವುದಾಗಿ ಇಡೀ ಜಗತ್ತು ಕೊಂಡಾಡುತ್ತಿದೆ. ಹೀಗಿರುವಾಗ ಕಾಂಗ್ರೆಸ್ ನ ಟೀಕೆಗಳು ಅಪ್ರಸ್ತುತ ಎಂದು ಹೇಳಿದರು.

ದೇಶದಲ್ಲಿ ಲಾಕ್ ಡೌನ್ ಸಫಲವಾಗಿದ್ದು, ಒಂದೇ ದಿಕ್ಕಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ನಮ್ಮ ಗುರಿ ಕೊರೋನಾ ವೈರಸ್ ಸೋಲಿಸುವುದೇ ಆಗಿದೆ. ಎಲ್ಲಾ ಪಕ್ಷಗಳು ಸರ್ಕಾರದ ಜತೆ ಸೇರಿ ಕಾರ್ಯನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆ. ನಾವು ಜಾತಿ, ಧರ್ಮ ಪಕ್ಷ ಮೀರಿ ಕೆಲಸ ಮಾಡಬೇಕಾಗಿದೆ. ದೇಶದಲ್ಲಿ ಹಲವು ಅಡೆತಡೆಗಳಿವೆ. ಆದರೆ ಎನ್.ಡಿ.ಎ ಸರ್ಕಾರ ಎಲ್ಲರ ಸಹಕಾರದೊಂದಿಗೆ ಎಲ್ಲವನ್ನು ದಾಟಿ ಮುನ್ನಡೆಯುತ್ತಿದೆ ಎಂದು ಜಾವಡೆಕರ್ ಹೇಳಿದರು.

SCROLL FOR NEXT