ದೇಶ

ತಬ್ಲಿಘಿ ಸದಸ್ಯರು ಚಿಕಿತ್ಸೆಗೆ ಸಹಕಾರ ನೀಡುತ್ತಿಲ್ಲ: ದೆಹಲಿ ಸರ್ಕಾರಕ್ಕೆ ವೈದ್ಯರಿಂದ ಮಾಹಿತಿ

Manjula VN

ನವದೆಹಲಿ: ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ ತಬ್ಲಿಘಿ ಸದಸ್ಯರು ಚಿಕಿತ್ಸೆಗೆ ಸಹಕಾರ ನೀಡುತ್ತಿಲ್ಲ ಎಂದು ವೈದ್ಯರು ದೆಹಲಿ ಸರ್ಕಾರದ ಬಳಿ ತಮ್ಮ ಅಳಲನ್ನು ತೋಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. 

ಮರ್ಕಜ್ ನಿಂದ ಸ್ಥಳಾಂತರಗೊಂಡಿರುವ  ಜನರು ಈಗಾಗಲೇ ದೆಹಲಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ನೀಡಲು ಸಹಕಾರ ನೀಡುತ್ತಿಲ್ಲ. ವೈದ್ಯಕೀಯ ಸಿಬ್ಬಂದಿಗಳೊಂದಿಗೆ ದುರ್ವರ್ತನೆ ತೋರುತ್ತಿದ್ದಾರೆ. ಹೀಗಾಗಿ ತಬ್ಲಿಘಿ ಸದಸ್ಯರು ದಾಖಲಾಗಿರುವ ಆಸ್ಪತ್ರೆಗಳ ಹೊರಗೆ ಭದ್ರತೆ ಹಾಗೂ ಆಸ್ಪತ್ರೆಯ ಸುತ್ತಮುತ್ತಲು ಭದ್ರತೆ ನೀಡುವಂತೆ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ. 

ಕೊರೋನಾ ಸೋಂಕು ಪೀಡಿತರಾಗಿ ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಈ ಕಾರ್ಯಕರ್ತರು ಔಷದಿ ಸೇವಿಸಲು ನಿರಾಕರಿಸುತ್ತಿದ್ದಾರೆ. ಅಲ್ಲದೆ, ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದಾರೆಂದು ಪತ್ರದಲ್ಲಿ ತಿಳಿಸಿದ್ದಾರೆ. 

ಈ ನಡುವೆ ಉತ್ತರಪ್ರದೇಶದ ಗಾಜಿಯಾಬಾದ್ ಆಸ್ಪತ್ರೆಯಲ್ಲಿ ಮಹಿಳಾ ನರ್ಸ್ ಗಳ ಜೊತೆಗೆ ಅನುಚಿತವಾಗಿ ವರ್ತಿಸಿದ ತಬ್ಲೀಘಿ ಜಮಾತ್ ಸದಸ್ಯರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಇನ್ನು ಮುಂದೆ ವೈರಸ್ ಸೋಂಕಿತ ಅಥವಾ ಶಂಕಿತ ತಬ್ಲೀಘಿ ಸದಸ್ಯರಿಗೆ ಚಿಕಿತ್ಸೆ ನೀಡುವ ಅಥವಾ ಕ್ವಾರಂಟೈನ್ ಮಾಡುವ ಸ್ಥಳಗಳಿಗೆ ಮಹಿಳಾ ನರ್ಸ್ಗಳು ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬಾರದು. ಪುರುಷ ಸಿಬ್ಬಂದಿಯನ್ನು ಮಾತ್ರ ನಿಯೋಜಿಸಬೇಕು ಎಂದೂ ನಿರ್ದೇಶನ ನೀಡಿದ್ದಾರೆ. 

ಗಾಜಿಯಾಬಾದ್ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿರುವ ಕೆಲ ತಬ್ಲೀಘಿ ಸದಸ್ಯರು ಗುರುವಾರ ವೈದ್ಯಕೀಯ ಸಿಬ್ಬಂದಿಯ ಮೇಲೆ ಉಗುಲುವುದು, ಅವರನ್ನು ನಿಂದಿಸುವುದು, ಮಹಿಳಾ ನರ್ಸ್ ಗಳ ಬಂದಾಗ ಬೆತ್ತಲೆ ಓಡಾಡುವುದು ಮುಂತಾದ ರೀತಿಯಲ್ಲಿ ಅನುಚಿತವಾಗಿ ವರ್ತಿಸಿದ್ದರು. 

SCROLL FOR NEXT