ದೇಶ

ಕೊರೋನಾ ವೈರಸ್ ಕಡಿವಾಣಕ್ಕೆ ಮೋದಿ ಸರ್ಕಾರದಿಂದ 'ಭಿಲ್ವಾರ' ಅಸ್ತ್ರ!

Srinivas Rao BV

ಜೈಪುರ: ಕೊರೋನಾ ವೈರಸ್ ಗೆ ಔಷಧಿ ಕಂಡುಹಿಡಿಯುವ ಮಾತು ಹಾಗಿರಲಿ, ಅದರ ಹರಡುವಿಕೆಗೆ ಕಡಿವಾಣ ಹಾಕುವುದಕ್ಕೇ ಇಡೀ ಜಗತ್ತು ಹರಸಾಹಸಪಡುತ್ತಿದೆ. ಇದಕ್ಕೆ ಭಾರತದಿಂದಷ್ಟೇ ಪರಿಹಾರ ನೀಡುವುದಕ್ಕೆ ಸಾಧ್ಯ ಎಂದು ವಿಶ್ವಸಂಸ್ಥೆಯಾದಿಯಾಗಿ ಜಗತ್ತೇ ಅಭಿಪ್ರಾಯಪಟ್ಟಿತ್ತು. ಅದಕ್ಕೆ ಮತ್ತಷ್ಟು ಪುಷ್ಟಿ ನೀಡುವಂತಿದೆ ಈ ವರದಿ.

ಭಾರತದಲ್ಲಿ ಪ್ರತಿದಿನವೂ ಕೊರೋನಾ ವೈರಸ್ ವೇಗವಾಗಿ ಹರಡುತ್ತಿದೆ. ಕೋವಿಡ್-19 ಹರಡುವಿಕೆ ತಡೆಯುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರೋಗ್ಯ ಸಚಿವಾಲಯದ ಮೂಲಕ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿದ್ದು, ಕೊರೋನಾ ವೈರಸ್ ಹಾಟ್ ಸ್ಪಾಟ್ ಗಳಲ್ಲಿ ’ಭಿಲ್ವಾರ’ ಅಸ್ತ್ರ ಪ್ರಯೋಗಿಸಲು ಸೂಚಿಸಿದೆ. 

ಏನಿದು 'ಭಿಲ್ವಾರ'? 

ಈ ಭಿಲ್ವಾರ ಎಂಬುದು ಅಸಲಿಗೆ ಯಾವುದೋ ಔಷಧ, ಅಥವಾ ಲಸಿಕೆಯಲ್ಲ, ಬದಲಾಗಿ ಭಾರತದ ರಾಜಸ್ಥಾನದಲ್ಲಿ ಇರುವ ಒಂದು ಊರು, ಅರೆ, ಇದಕ್ಕೂ ಕೊರೋನಾ ತಡೆಗೆ ಏನು ಸಂಬಂಧ ಎಂಬ ಪ್ರಶ್ನೆ ನಿಮ್ಮಲ್ಲಿ ಖಂಡಿತ ಮೂಡುತ್ತದೆ. ಭಿಲ್ವಾರ ಕೊರೋನಾ ತಡೆಗೆ ಔಷಧವನ್ನೇನು ಕಂಡು ಹಿಡಿದಿಲ್ಲ. ಆದರೆ ಕೊರೋನಾ ಹಾಟ್ ಸ್ಪಾಟ್ ಆಗಿದ್ದ ಭಿಲ್ವಾರದಲ್ಲಿ ಅದನ್ನು ತಡೆಗಟ್ಟಿ ಹಿಮ್ಮೆಟ್ಟಿಸಲು ಕೈಗೊಂಡ ಕಂಡು ಕೇಳರಿಯದ ಕಠಿಣ ಕ್ರಮ ಇದೆಯಲ್ಲಾ ಸಧ್ಯಕ್ಕೆ ಅದೇ ಕೊರೋನಾ ತಡೆಗೆ ದಿವೌಷಧ ಎನ್ನುವಂತಾಗಿದೆ. 

ರಾಜಸ್ಥಾನದ ಭಿಲ್ವಾರ ಎಂಬ ಪ್ರದೇಶ ಕಳೆದ ತಿಂಗಳೇ ಕೊರೋನಾ ಹಾಟ್ ಸ್ಪಾಟ್ ಆಗಿತ್ತು. ಆದರೆ ಇಲ್ಲಿನ ಆಡಳಿತ ಕೈಗೊಂಡ ಕಠಿಣ ನಿರ್ಧಾರದಿಂದ ಈಗ ಕೊರೋನಾದ ಹೊಸ ಪ್ರಕರಣಗಳು ಇಲ್ಲಿ ವರದಿಯಾಗಿಲ್ಲ. 

ಭಿಲ್ವಾರಾದಲ್ಲಿ ಯಾವೆಲ್ಲಾ ಭಾಗಗಳಲ್ಲಿ ಹೆಚ್ಚಿನ ಕೊರೋನಾ ಸೋಂಕುಗಳು ವರದಿಯಾಗಿತ್ತೋ ಆ ಪ್ರದೇಶವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಪರಿಣಾಮ ಕೊರೋನಾ ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಂದಿದೆ. 

ಈಗ ದೇಶಾದ್ಯಂತ ಇರುವ 62 ಹಾಟ್ ಸ್ಪಾಟ್ (ಜಿಲ್ಲೆ) ಗಳಲ್ಲಿ ಶೇ.80 ರಷ್ಟು ಕೊರೋನಾ ವೈರಸ್ ಪ್ರಕರಣಗಳಿದ್ದು, ಒಟ್ಟಾರೆ 274 ಜಿಲ್ಲೆಗಳು ಕೊರೋನಾ ಸೋಂಕು ಪ್ರಕರಣಗಳನ್ನು ವರದಿ ಮಾಡಿವೆ. 

ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಕೊರೋನಾ ಹರಡುವಿಕೆ ತಡೆಗೆ ಭಿಲ್ವಾರ ಮಾದರಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸೂಚಿಸಿದೆ. 

SCROLL FOR NEXT