ದೇಶ

ಮಹಿಳೆಯರ ಜನಧನ್ ಖಾತೆಗೆ ಎರಡು ಕಂತುಗಳಲ್ಲಿ ಮತ್ತೆ 1 ಸಾವಿರ ರೂ. ಜಮೆ

Lingaraj Badiger

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಮಹಿಳೆಯರ ಜನಧನ್ ಖಾತೆಗೆ 500 ರೂಪಾಯಿ ನೇರ ವರ್ಗಾವಣೆ ಮಾಡಿದ್ದು, ಈಗ ಮತ್ತೆ ಎರಡು ಕಂತುಗಳಲ್ಲಿ 1 ಸಾವಿರ ರೂಪಾಯಿ ಜಮೆ ಮಾಡುವುದಾಗಿ ಹೇಳಿದೆ.

ಈ ಸಂಬಂಧ ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಕರೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ಈಗಾಗಲೇ ಏಪ್ರಿಲ್ ತಿಂಗಳಲ್ಲಿ 500 ರೂಪಾಯಿ ಮಹಿಳೆಯರ ಜನಧನ್ ಖಾತೆಗೆ ಜಮೆ ಮಾಡಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಮತ್ತೆ 1 ಸಾವಿರ ರೂಪಾಯಿ ಜಮೆ ಮಾಡುವುದಾಗಿ ಗುರುವಾರ ತಿಳಿಸಿದೆ.

ಜನಧನ್ ಖಾತೆಗೆ ಜಮೆಯಾದ ಹಣ ವಿಥ್ ಡ್ರಾ ಮಾಡದಿದ್ದರೆ ಆ ಹಣವನ್ನು ಸರ್ಕಾರ ಮತ್ತೆ ವಾಪಸ್ ಪಡೆಯಲಿದೆ ಎಂಬ ವದಂತಿಗಳನ್ನು ನಂಬದಂತೆ ಗ್ರಾಹಕರಿಗೆ ಹೇಳಿ ಎಂದು ಅತಿ ಹೆಚ್ಚು ಜನಧನ್ ಖಾತೆ ಹೊಂದಿರುವ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸರ್ಕಾರ ಸೂಚಿಸಿದೆ.

ವಿಥ್ ಡ್ರಾ ಮಾಡದಿದ್ದರೆ ಸರ್ಕಾರ ಹಣ ವಾಪಸ್ ಪಡೆಯುತ್ತದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಜನ ಲಾಕ್ ಡೌನ್ ಉಲ್ಲಂಘಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬ್ಯಾಂಕ್ ಗಳ ಮುಂದೆ ಕ್ಯೂ ನಿಂತಿದ್ದರು. ಈ ಹಿನ್ನೆಲೆಯಲ್ಲಿ ಜನಧನ್ ಖಾತೆಗೆ ಜಮೆ ಮಾಡಿದ ಹಣವನ್ನು ಸರ್ಕಾರ ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ ಎಂದು ಹಣಕಾಸು ಇಲಾಖೆ ಇಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದೆ.

SCROLL FOR NEXT