ದೇಶ

ಕೋವಿಡ್-19: ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಸಭೆ, ಲಾಕ್ ಡೌನ್ ಅವಧಿ ವಿಸ್ತರಣೆಗೆ ಮುಖ್ಯಮಂತ್ರಿಗಳ ಇಂಗಿತ

Nagaraja AB

ನವದೆಹಲಿ: ಕೋವಿಡ್-19 ವಿರುದ್ಧ ದೇಶ ಹೋರಾಡುತ್ತಿರುವಂತೆ 21 ದಿನಗಳ ಕಾಲ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ವಿಸ್ತರಣೆಯಾಗಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸುವ ಮೂಲಕ ಪ್ರತಿಕ್ರಿಯೆ ಪಡೆದುಕೊಂಡರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ , ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ , ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ದೇಶದಲ್ಲಿ ಕರೋನವೈರಸ್ ಪ್ರಕರಣಗಳ ತೀವ್ರ ಏರಿಕೆ ತಡೆಯಲು ಲಾಕ್‌ಡೌನ್ ಅವಧಿಯನ್ನು ವಿಸ್ತರಿಸುವ ಇಂಗಿತವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೇರಿದಂತೆ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳು ಏಪ್ರಿಲ್ 30 ರವರೆಗೆ ಲಾಕ್ ಡೌನ್ ಅವಧಿ ವಿಸ್ತರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಡಿಯೋ ಕಾನ್ಫರೆನ್ಸ್‍ ನಲ್ಲಿ ಮಾತನಾಡಿದ ಪ್ರಧಾನಿ, ‘ನಾನು ದಿನದ 24 ತಾಸು ಲಭ್ಯವಿರುತ್ತೇನೆ. ಯಾವುದೇ ಮುಖ್ಯಮಂತ್ರಿ ನನ್ನೊಂದಿಗೆ ಮಾತನಾಡಬಹುದು. ಕೋವಿಡ್-19 ಕುರಿತ ಸಲಹೆಗಳನ್ನು ಯಾವಾಗ ಬೇಕಾದರೂ ನೀಡಬಹುದು. ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬೇಕು.’ ಎಂದು ಹೇಳಿದ್ದಾರೆ.

ದೇಶಾದ್ಯಂತ 21 ದಿನಗಳ ಲಾಕ್‍ಡೌನ್‍ ಅವಧಿ ಮಂಗಳವಾರವರೆಗೆ ಇದ್ದು, ಆನಂತರವೂ ಈ ಅವಧಿಯನ್ನು 15 ದಿನಗಳವರೆಗೆ ಪಂಜಾಬ್ ಮತ್ತು ಒಡಿಶಾ ಸರ್ಕಾರಗಳು ವಿಸ್ತರಿಸಿವೆ. ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‍ ಗೆಹ್ಲೋಟ್‍ ಸೇರಿದಂತೆ ಅನೇಕ ಮುಖ್ಯಮಂತ್ರಿಗಳು ಸಹ ಇನ್ನೂ 15 ದಿನ ಲಾಕ್‍ಡೌನ್‍ ವಿಸ್ತರಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಸಂವಾದ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಮುಖ್ಯಮಂತ್ರಿಗಳು ಮುಖಕ್ಕೆ ಮಾಸ್ಕ್ ಧರಿಸಿರುವುದು ಕಂಡುಬಂದಿತು.

ಪ್ರಸ್ತುತ ಜಾರಿಯಲ್ಲಿರುವ 21 ದಿನಗಳ ಲಾಕ್ ಡೌನ್ ಏಪ್ರಿಲ್ 14 ರಂದು ಅಂತ್ಯವಾಗಲಿದ್ದು, ಪಂಜಾಬ್ ಹಾಗೂ ಒಡಿಶಾ ರಾಜ್ಯಗಳು ಲಾಕ್ ಡೌನ್ ಅವಧಿಯನ್ನು ಈಗಾಗಲೇ ವಿಸ್ತರಿಸಿವೆ. ಕೇಂದ್ರ ಸರ್ಕಾರ ಕೂಡಾ ಕೆಲ ವಿನಾಯಿತಿಯೊಂದಿಗೆ ಲಾಕ್ ಡೌನ್ ವಿಸ್ತರಿಸುವ ಸಾಧ್ಯತೆ ಇದೆ

ಪ್ರಸ್ತುತವಿರುವ ಲಾಕ್‌ಡೌನ್‌ನಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದ್ದು, ಸೇವೆಗಳು ಮತ್ತು ಹೆಚ್ಚಿನ ವರ್ಗದ ಜನರಿಗೂ ವಿನಾಯಿತಿ ನೀಡಬೇಕೆ ಎಂಬ ಬಗ್ಗೆ ರಾಜ್ಯಸರ್ಕಾರಗಳ ಅಭಿಪ್ರಾಯಗಳನ್ನು ಕೇಂದ್ರ ಗೃಹ ಸಚಿವಾಲಯ ಕೋರಿದೆ.

ಲಾಕ್ ಡೌನ್ ಜಾರಿಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿಗೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ನಡೆಸಿದ್ದಾರೆ.

ಕೊರೋನಾ ಸೋಂಕಿನಿಂದ ದೇಶಾದ್ಯಂತ ಈವರೆಗೂ ಸುಮಾರು 251 ಜನರು ಮೃತಪಟ್ಟಿದ್ದು, 7,510 ಜನರು ಸೋಂಕಿಗೆ ತುತ್ತಾಗಿದ್ದಾರೆ. 700ಕ್ಕೂ ಹೆಚ್ಚು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 

SCROLL FOR NEXT