ದೇಶ

ಕಮಲ್‌ನಾಥ್‌ಗೆ ಹಿನ್ನಡೆ: ಬಹುಮತ ಸಾಬೀತು ಪಡಿಸುವಂತೆ ಆದೇಶಿಸುವ 'ಅಧಿಕಾರ' ರಾಜ್ಯಪಾಲರಿಗಿದೆ- ಸುಪ್ರೀಂ ಕೋರ್ಟ್

Vishwanath S

ನವದೆಹಲಿ: ಮಧ್ಯಪ್ರದೇಶ ರಾಜ್ಯಪಾಲ ಲಾಲ್ಜಿ ಟಂಡನ್ ಅವರು ಕೈಗೊಂಡ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಸೋಮವಾರ ಸಮರ್ಥಿಸಿದೆ.

ಮಾಜಿ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಬಹುಮತ ಸಾಬೀತುಪಡಿಸುವಂತೆ ಅವರು ನೀಡಿದ್ದ ಆದೇಶ ಸರಿಯಾಗಿದೆ. ಬಹುಮತ ಸಾಬೀತುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸುವ ಅಧಿಕಾರ ರಾಜ್ಯಪಾಲರು ಹೊಂದಿದ್ದಾರೆ ಎಂದು ದೇಶದ ಸರ್ವೋಚ್ಛ ನ್ಯಾಯಸ್ಥಾನ ಸೋಮವಾರ ತೀರ್ಪು ನೀಡಿದೆ.

ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಹೇಮಂತ್ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ. ವಿಧಾನಸಭೆ ಅಧಿವೇಶನ ನಡೆಸಬೇಕು ಎಂದು ಸೂಚಿಸುವ ಅಧಿಕಾರ ರಾಜ್ಯಪಾಲರು ಹೊಂದಿದ್ದಾರೆ. ಆದರೆ, ಬಹುಮತ ಸಾಬೀತುಪಡಿಸುವಂತೆ ಆದೇಶಿಸುವ ಅಧಿಕಾರ ಮಾತ್ರ ಅವರಿಗಿಲ್ಲ ಎಂದು ಅಂದಿನ ಕಮಲ ನಾಥ್ ನೇತೃತ್ವದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನ ಮೊರೆ ಹೋಗಿತ್ತು. 

ಈ ಕುರಿತು ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯ ಬಹುಮತ ನಿರೂಪಿಸುವಂತೆ ಆದೇಶಿಸುವ ಅಧಿಕಾರ ರಾಜ್ಯಪಾಲರು ಹೊಂದಿದ್ದಾರೆ ಎಂದು ಮಹತ್ವದ ತೀರ್ಪು ನೀಡಿದೆ. ೧೯೯೪ರಲ್ಲಿ ಎಸ್.ಆರ್. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ಆಧಾರವಾಗಿರಿಸಿಕೊಂಡು ಬಲ ನಿರೂಪಣೆಗೆ ಸರ್ಕಾರಕ್ಕೆ ಆದೇಶಿಸುವ ಅಧಿಕಾರ ರಾಜ್ಯಪಾಲರು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.

ಬಹುಮತ ಸಾಬೀತುಪಡಿಸಬೇಕೆಂಬ ಏಕೈಕ ಕಾರ್ಯಸೂಚಿಯಾಗಿಟ್ಟುಕೊಂಡು ಮಾರ್ಚ್ ೨೦ರಂದು ವಿಧಾನಸಭೆ ಅಧಿವೇಶನ ನಿರ್ವಹಿಸಬೇಕೆಂದು ವಿಧಾನಸಭೆ ಸ್ಪೀಕರ್ ಪ್ರಜಾಪತಿ ಅವರಿಗೆ ಸುಪ್ರೀಂಕೊರ್ಟ್ ಆದೇಶಿಸಿತ್ತು. ಬಹುಮತ ಸಾಬೀತುಪಡಿಸುವಲ್ಲಿ ಅಂದಿನ ಮುಖ್ಯಮಂತ್ರಿ ಕಮಲ ನಾಥ್ ವಿಫಲಗೊಂಡ ನಂತರ ಅವರು, ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಸಲ್ಲಿಸಿದ್ದರು.

SCROLL FOR NEXT