ದೇಶ

ಕೋವಿಡ್-19: ಕ್ವಾರಂಟೈನ್ ನಲ್ಲಿರುವವರ ಮೇಲೆ ನಿಗಾ ವಹಿಸಲು ಉಪಕರಣ, ಆಪ್ ತಯಾರಿಸಿದ ಬಿಇಎಲ್!

Srinivas Rao BV

ಬೆಂಗಳೂರು: ಬೆಂಗಳೂರು ಮೂಲದ ಸರ್ಕಾರಿ ಸ್ವಾಮ್ಯದ ಸಂಸ್ಥೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಕೋವಿಡ್-19 ಗೆ ಸಂಬಂಧಿಸಿದಂತೆ ವಿನೂತನ ಉಪಕರಣ ತಯಾರಿಸಿದ್ದು, ದೇಶದ ಗಮನ ಸೆಳೆದಿದೆ. 

ಕ್ವಾರಂಟೈನ್ ನಲ್ಲಿರುವವರಿಗಾಗಿಯೆ ಈ ಉಪಕರಣ ತಯಾರಿಸಲಾಗಿದ್ದು, ಕೈಯ ಮುಂಭಾಗಕ್ಕೆ ಹಾಗೂ ಎದೆಯ ಭಾಗಕ್ಕೆ ಕಟ್ಟಿಕೊಳ್ಳುವ ಬ್ಯಾಂಡ್ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ಧರಿಸಿದ ವ್ಯಕ್ತಿಯ ದೇಹದ ತಾಪಮಾನ ಹಾಗೂ ಉಸಿರಾಟದ ಬಗ್ಗೆ ಸರ್ವರ್ ಗೆ ಮಾಹಿತಿ ರವಾನೆ ಮಾಡಿ ಸಂಗ್ರಹಿಸಡಲಾಗುತ್ತದೆ. ಇದನ್ನು ಪ್ರತಿ ಜಿಲ್ಲೆಯಲ್ಲಿಯೂ ವೈದ್ಯಾಧಿಕಾರಿಗಳು ಗಮನಿಸಿ, ಕ್ವಾರಂಟೈನ್ ನಲ್ಲಿರುವವರ ಆರೋಗ್ಯ ಸ್ಥಿತಿ, ಚಲನವಲನಗಳ ಮೇಲೆ ನಿಖರವಾಗಿ ಕಣ್ಣಿಡುವುದಕ್ಕೆ ಸಾಧ್ಯವಾಗಲಿದೆ. 

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಉಪಕರಣ ತಯಾರಿಸಿರುವ ವಿಜ್ಞಾನಿಗಳ ತಂಡದ ಮುಖ್ಯಸ್ಥರಾದ ಬಿಇಎಲ್ ನ ರಾಜಶೇಖರ್ ಮಾತನಾಡಿದ್ದು, ಏಮ್ಸ್ ನಿಂದ ಬಿಇಎಲ್ ಗೆ ಈ ಪರಿಕಲ್ಪನೆ ಕಳಿಸಲಾಗಿತ್ತು. ಇದನ್ನು 40 ಜನರಿದ್ದ ಮೂರು ತಂಡ ಒಂದೇ ವಾರದಲ್ಲಿ ತಯಾರು ಮಾಡಿದೆ. ಈಗಾಗಲೆ ಮೊದಲ ಬ್ಯಾಚ್ ನ ಬ್ಯಾಂಡ್ ಗಳನ್ನು ಋಷಿಕೇಶದ ಸಂಸ್ಥೆಗೆ ಕಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

"ಈ ಬ್ಯಾಂಡ್ ಗಳನ್ನು ರೋಗಿಗಳು ಅಥವಾ ರೋಗ ಲಕ್ಷಣ ಇರುವವರು ಧರಿಸಬೇಕು, ಈ ಉಪಕರಣದಲ್ಲಿ ಜಿಪಿಎಸ್ ಸಕ್ರಿಯವಾಗಿರಲಿದ್ದು, ಸರ್ವರ್ ಗೆ ಜೋಡಿಸಿರಲಾಗಿರುತ್ತದೆ. ಎದೆ ಭಾಗಕ್ಕೆ ಧರಿಸಿರುವ ಬ್ಯಾಂಡ್ ವ್ಯಕ್ತಿಯ ಉಸಿರಾಟದ ಸ್ಥಿತಿಯ ಕುರಿತು ಮಾಹಿತಿ ನೀಡಿದರೆ, ಕೈಯಲ್ಲಿ ಧರಿಸಿರುವ ಬ್ಯಾಂಡ್ ದೇಹದ ತಾಪಮಾನದ ಬಗ್ಗೆ ಮಾಹಿತಿ ನೀಡಲಿದೆ. ಬ್ಯಾಂಡ್ ಧರಿಸಿರುವ ವ್ಯಕ್ತಿಯ ಆರೋಗ್ಯದ ಬಗ್ಗೆ ಜಿಲ್ಲಾ ಮುಖ್ಯ ವೈದ್ಯಾಧಿಕಾರಿಗೆ ಅಲರ್ಟ್ ಹೋಗಲಿದೆ. ಮುಂದಿನ ಹಂತದಲ್ಲಿ ಮಾಹಿತಿಯನ್ನು ವೈದ್ಯಾಧಿಕಾರಿಗಳು ಪ್ರಾದೇಶಿಕವಾಗಿ ಆರೋಗ್ಯ ಸಿಬ್ಬಂದಿಗಳ ಜೊತೆ ಹಂಚಿಕೊಂಡು ಅಲರ್ಟ್ ನೀಡಲು ಈ ಉಪಕರಣ ಸಹಕಾರಿಯಾಗಲಿದೆ". 

ಒಂದು ವೇಳೆ ಯಾವುದೇ ವ್ಯಕ್ತಿ ಈ ಬ್ಯಾಂಡ್ ನ್ನು ಕಿತ್ತೆಸೆದರೆ, ಅದರ ಬಗ್ಗೆಯೂ ಮಾಹಿತಿ ರವಾನೆಯಾಗಲಿದೆ. ಈ ರೀತಿಯ ಬ್ಯಾಂಡ್ ಗಳನ್ನು ದೇಶದಲ್ಲೇ ಮೊದಲ ಬಾರಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಉಪಕರಣದ ಕಾರ್ಯನಿರ್ವಹಣೆ ಏಮ್ಸ್ ನಿಂದ ಪರೀಕ್ಷೆಗೊಳಪಟ್ಟಿದ್ದು, ಅನುಮತಿ ದೊರೆತ ಬೆನ್ನಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸುತ್ತೇವೆ ಎನ್ನುತ್ತಾರೆ ರಾಜಶೇಖರ್.  

ಏಮ್ಸ್ ನಿಂದ 25,000 ಜೋಡಿ ಬ್ಯಾಂಡ್ ಗಳಿಗೆ ಬೇಡಿಕೆ ಬರುವ ಸಾಧ್ಯತೆ ಇದ್ದು, ಪ್ರತಿ ವ್ಯಕ್ತಿಗೆ ಅಳವಡಿಸಲಾಗುವ ಉಪಕರಣದ ಅಭಿವೃದ್ಧಿಗೆ 10,000 ರೂಪಾಯಿ ವೆಚ್ಚವಾಗಲಿದೆ. ಇದನ್ನು ಲಾಭದ ದೃಷ್ಟಿಯಿಂದ ಮಾಡಿಲ್ಲ. ಸಂಕಷ್ಟದ ಸ್ಥಿತಿಯಲ್ಲಿ ಇದು ನಮ್ಮ ಕೊಡುಗೆಯಾಗಿರುವುದರಿಂದ ನಾವು ಶುಲ್ಕ ವಿಧಿಸುತ್ತಿಲ್ಲ ಎಂದು ರಾಜಶೇಖರ್ ತಿಳಿಸಿದ್ದಾರೆ. 
 

SCROLL FOR NEXT