ದೇಶ

ಮಹಾರಾಷ್ಟ್ರದಲ್ಲಿ ಹೆಚ್ಚಿದ ಕೊರೋನಾ ಆರ್ಭಟ: ವಸತಿ ಸಚಿವ ಜಿತೇಂದ್ರ ಅವ್ಹಾದ್'ಗೂ ತಟ್ಟಿದ ಮಹಾಮಾರಿ

Manjula VN

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದೀಗ ಮಹಾರಾಷ್ಟ್ರ ವಸತಿ ಸಚಿವ ಜಿತೇಂದ್ರ ಅವ್ಹಾದ್ ಕೂಡ ವೈರಸ್ ನಿಂದ ಬಳಲುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ಸಚಿವರಲ್ಲಿ ವೈರಸ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇದೀಗ ಅವರ ಕುಟುಂಬದ 12ಕ್ಕೂ ಹೆಚ್ಚು ಮಂದಿಯನ್ನು ಕಳೆದ 10 ದಿನಗಳಿಂದ ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದು ತಿಳಿದುಬಂದಿದೆ. 

ಈ ಮೊದಲು ಜಿತೇಂದ್ರ ಅವರ ಭದ್ರತಾ ಸಿಬ್ಬಂದಿಯಲ್ಲಿ ವೈರಸ್ ದೃಢಪಟ್ಟಿತ್ತು. ಇದಾದ ಬಳಿಕ ಅವ್ಹಾದ್ ಅವರನ್ನು ಪರೀಕ್ಷೆಗೊಳಪಡಿಸಲಾಗಿತ್ತು. ಈ ವೇಳೆ ವೈರಸ್ ಇಲ್ಲ ಎಂದು ತಿಳಿಸಲಾಗಿತ್ತು. ಆದರೆ, ಗುರುವಾರ ವೈರಸ್ ದೃಢಪಟ್ಟಿದ್ದು, ಇದೀಗ ರಾಜ್ಯದಲ್ಲಿ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ. 

ವೈರಸ್ ಲಕ್ಷಣಗಳು ಕಂಡ ಬಂದ ಹಿನ್ನೆಲೆಯಲ್ಲಿ ಬುಧವಾರ ಸಚಿವರು ಆಸ್ಪತ್ರೆಗೆ ದಾಖಲಾಗಿತ್ತು. ಈ ವೇಳೆ ಪರೀಕ್ಷೆ ನಡೆಸಿದಾಗ ನಿನ್ನೆ ವೈರಸ್ ಇರುವುದು ದೃಢಪಟ್ಟಿದೆ. ಇದೀಗ ಸಚಿವರಿಂದ ಸಾಕಷ್ಟು ಮಂದಿಗೂ ವೈರಸ್ ಹರಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 

ತಬ್ಲಿಘೀ ಜಮಾತ್ ಕಾರ್ಯಕ್ರಮದಲ್ಲಿ ಭಾಗವಿಸಿದ್ದವರನ್ನು ಪರಿಶೀಲನೆ ನಡೆಸುವ ಸಲುವಾಗಿ ಈ ಹಿಂದೆ ಮುಂಬೈನ ಠಾಣೆಯಲ್ಲಿ ಪೊಲೀಸರನ್ನೂ ಸಚಿವರು ಭೇಟಿ ಮಾಡಿದ್ದರು. ಸಚಿವರನ್ನು ಭೇಟಿ ಮಾಡಿದ್ದ ಪೊಲೀಸ್ ಕೂಡ ಇತರೆ ಪೊಲೀಸ್ ಸಿಬ್ಬಂದಿಗಳು, ಮಾಧ್ಯಮವರ್ಗದವರು ಹಾಗೂ ಇತರೆ ಅಧಿಕಾರಿಗಳನ್ನು ಭೇಟಿ ಮಾಡಿದ್ದು, ಇದರಿಂದ ದೊಡ್ಡ ಮಟ್ಟದಲ್ಲಿಯೇ ವೈರಸ್ ಹರಡಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. 

ಈ ಕುರಿತು ಹಿರಿಯ ಸಚಿವರು ದೃಢಪಡಿಸಿದ್ದು, ಎನ್'ಸಿಪಿ ಹಾಗೂ ಸರ್ಕಾರದ ಅಧಿಕಾರಿಗಳು ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನೂ ನೀಡಿಲ್ಲ.

ಈ ನಡುವೆ ಮತ್ತೊಂದು ಆಘಾತಕಾರಿ ವಿಚಾರವೆಂದರೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದ ಎದುರು ಟೀ ಮಾರಾಟ ಮಾಡುತ್ತಿದ್ದ ವ್ಯಾಪಾರಿಯಲ್ಲೂ ಕೊರೋನಾ ದೃಢಪಟ್ಟಿರುವುದಾಹಿ ವರದಿಗಳು ತಿಳಿಸಿವೆ. . 

SCROLL FOR NEXT