ದೇಶ

ತುಟ್ಟಿಭತ್ಯೆ ಕಡಿತ ಅಮಾನವೀಯ ಮತ್ತು ಅಸೂಕ್ಷ್ಮ ನಿರ್ಧಾರ: ರಾಹುಲ್ ಗಾಂಧಿ ಸೇರಿ ಕಾಂಗ್ರೆಸ್ ನಾಯಕರ ಟೀಕೆ

Sumana Upadhyaya

ನವದೆಹಲಿ: ಕೊರೋನಾ ವೈರಸ್ ಲಾಕ್ ಡೌನ್ ಮಧ್ಯೆ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸರ್ಕಾರಿ ನೌಕರರ ಮತ್ತು ಸೇನಾ ಯೋಧರ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಸೌಲಭ್ಯಕ್ಕೆ ಕಡಿತ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಟ್ವೀಟ್ ಪೇಜ್ ನಲ್ಲಿ ನೇರ ಪ್ರಸಾರ ವಿಡಿಯೊದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಸರ್ಕಾರ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರದ ಅಮಾನವೀಯ ಮತ್ತು ನಿರ್ದಾಕ್ಷಿಣ್ಯ ಕ್ರಮ ಇದಾಗಿದ್ದು, ಸರ್ಕಾರಿ ನೌಕರರ ಸೌಲಭ್ಯವನ್ನು ಕಡಿತ ಮಾಡುವ ಬದಲು ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆ ಮತ್ತು ಸೆಂಟ್ರಲ್ ವಿಸ್ಟಾ ಸುಂದರೀಕರಣ ಯೋಜನೆಯನ್ನು ಸರ್ಕಾರ ರದ್ದುಪಡಿಸಿ ಅದರ ಹಣ ಉಳಿಸಲಿ ಎಂದಿದ್ದಾರೆ.

ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು, ಸೈನಿಕರ ತುಟ್ಟಿ ಭತ್ಯೆ ಮತ್ತು ತುಟ್ಟಿ ಪರಿಹಾರ ಸೌಲಭ್ಯವನ್ನು ಕಡಿತ ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ಅಮಾನವೀಯ ಮತ್ತು ಅಸಂವೇದನಾಶೀಲವಾದದ್ದು. ಅದರ ಬದಲು ಲಕ್ಷಾಂತರ ಕೋಟಿ ರೂಪಾಯಿಗಳ ಬುಲೆಟ್ ರೈಲು ಮತ್ತು ಕೇಂದ್ರ ವಿಸ್ಟಾ ಸೌಂದರ್ಯೀಕರಣ ಯೋಜನೆಯನ್ನು ರದ್ದುಮಾಡಿ ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಇದೇ ರೀತಿ ವಿಡಿಯೊದಲ್ಲಿ ಮಾತನಾಡಿರುವ ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್, ಕೇಂದ್ರ ಸರ್ಕಾರ ಈ ಕೊರೋನಾ ಸಂಕಷ್ಟದ ಸಮಯದಲ್ಲಿ ಪರಿಹಾರ ನೀಡುವ ಬದಲು 1.1 ಕೋಟಿ ಕೇಂದ್ರ ಸರ್ಕಾರಿ ಉದ್ಯೋಗಿಗಳ ಭಾವನೆಗಳಿಗೆ ನೋವುಂಟುಮಾಡಿದ್ದಾರೆ. ಸರ್ಕಾರಿ ನೌಕರರು, ಯೋಧರ ಸೌಲಭ್ಯಗಳನ್ನು ಕಡಿತ ಮಾಡುವ ಬದಲು ಸರ್ಕಾರದ ನಿರುಪಯೋಗ ಯೋಜನೆಗಳಿಗೆ ತಗಲುವ ವೆಚ್ಚಗಳನ್ನು ಕಡಿತ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಪಿ ಚಿದಂಬರಂ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ್ ಮತ್ತು ಇತರ ನಾಯಕರು ಕೂಡ ಇದೇ ರೀತಿ ಒತ್ತಾಯಿಸಿದ್ದಾರೆ.

SCROLL FOR NEXT