ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ವೈರಸ್ ಸೋಂಕು ದೃಢಪಟ್ಟ ಕಾರಣ ಕೇವಲ 24 ಗಂಟೆಗಳ ಅವಧಿಯಲ್ಲಿ 2ನೇ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ.
ದೆಹಲಿಯ ಬಾಬು ಜಗಜೀವನ್ ರಾಮ್ ಮೆಮೋರಿಯಲ್ ಆಸ್ಪತ್ರೆಯ 44 ವೈದ್ಯಕೀಯ ಸಿಬ್ಬಂದಿಗಳಲ್ಲಿ ಕೊರೋನಾ ವೈರಸ್ ಕಂಡುಬಂದ ಹಿನ್ನಲೆಯಲ್ಲಿ ಇಡೀ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಇದಾದ ಕೇವಲ 24 ಗಂಟೆಗಳ ಅವಧಿಯಲ್ಲೇ ಮತ್ತೊಂದು ಆಸ್ಪತ್ರೆಯನ್ನು ಕೂಡ ಸೀಲ್ ಡೌನ್ ಮಾಡಲಾಗಿದೆ. ಇಲ್ಲಿನ ಹಿಂದೂರಾವ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನರ್ಸ್ ಒಬ್ಬರಲ್ಲಿ ಸೋಂಕು ಕಂಡುಬಂದಿದ್ದು, ಅವರು ಆಸ್ಪತ್ರೆ ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಇಡೀ ಆಸ್ಪತ್ರೆಯನ್ನೇ ಸೀಲ್ ಡೌನ್ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು, ದೆಹಲಿಯ ದೊಡ್ಡ ಆಸ್ಪತ್ರೆಗಳಲ್ಲಿ ಒಂದಾದ ಹಿಂದೂರಾವ್ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಜಹಂಗೀರ್ ಪುರಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ಕಂಡುಬರುತ್ತಿದ್ದು, ಆಸ್ಪತ್ರೆಯ ನರ್ಸ್ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಹೀಗಾಗಿ ಸೋಂಕು ಪ್ರಸರಣ ತಪ್ಪಿಸಲು ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಿ ಕಂಟೈನ್ ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಆಸ್ಪತ್ರೆಯ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದ್ದು, ಇಡೀ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಅಂತೆಯೇ ದೆಹಲಿ ಸರ್ಕಾರ ವೈದ್ಯಕೀಯ ಸಿಬ್ಬಂದಿಗಳಿಗೆ ಒಂದಷ್ಟು ನಿರ್ದೇಶನ ನೀಡಿದ್ದು, ಸೋಂಕು ಪೀಡಿತ ವ್ಯಕ್ತಿಗಳನ್ನು ಚಿಕಿತ್ಸೆಗೊಳಪಡಿಸುವಾಗ ಯಾವೆಲ್ಲಾ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ.
ಇನ್ನು ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 111 ಹೊಸ ಪಾಸಿಟಿವ್ ಪ್ರಕರಣಗಳ ದಾಖಲಾಗಿದ್ದು, ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 2,625ಕ್ಕೆ ಏರಿಕೆಯಾಗಿದೆ. ಈವರೆಗೂ ದೆಹಲಿಯಲ್ಲಿ 54 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.