ದೇಶ

ಎಲ್ಲಾ ಕೊರೋನಾ ರೋಗಿಗಳಿಗೂ ಪ್ಲಾಸ್ಮಾ ಥೆರೆಪಿ ಪ್ರಯೋಗದ ವಿರುದ್ಧ ಕೇಂದ್ರದ ಎಚ್ಚರಿಕೆ!

Srinivas Rao BV

ನವದೆಹಲಿ: ದೆಹಲಿಯಲ್ಲಿ ಕೊರೋನಾ ರೋಗಿಗೆ ಪ್ಲಾಸ್ಮಾ ಥೆರೆಪಿ ಪ್ರಯೋಗ ಮಾಡಿ ಯಶಸ್ವಿಯಾದ ಬೆನ್ನಲ್ಲೇ ಈ ಚಿಕಿತ್ಸಾ ವಿಧಾನವನ್ನು ಎಲ್ಲಾ ಕೊರೋನಾ ರೋಗಿಗಳಿಗೂ ಪ್ರಯೋಗಿಸುವುದರ ವಿರುದ್ಧ ಕೇಂದ್ರ ಸರ್ಕಾರ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ. 

ಭಾರತೀಯ ವೈದ್ಯ ಸಂಶೋಧನಾ ಪರಿಷತ್ ಕೋವಿಡ್-19 ಗೆ ಅಧಿಕೃತ ಚಿಕಿತ್ಸಾ ವಿಧಾನಗಳಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ಪ್ಲಾಸ್ಮಾ ಥೆರೆಪಿಗೆ ಸಂಬಂಧಿಸಿದಂತೆ ಕ್ಲಿನಿಕಲ್ ಟ್ರಯಲ್ (ವೈದ್ಯಕೀಯ ಪ್ರಯೋಗ)ಗಳನ್ನು ಇನ್ನೂ ನಡೆಸುತ್ತಿದೆ ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ.    

ಪ್ಲಾಸ್ಮಾ ಥೆರೆಪಿಯ ವೈದ್ಯಕೀಯ ಪ್ರಯೋಗಗಳ ಬಗ್ಗೆ ಐಸಿಎಂಆರ್ ಸಂಶೋಧನೆಯನ್ನು ಪೂರ್ಣಗೊಳಿಸಿ ಫಲಿತಾಂಶ ಪ್ರಕಟಿಸುವವರೆಗೂ ಈ ಚಿಕಿತ್ಸಾವಿಧಾನವನ್ನು ವ್ಯಾಪಕವಾಗಿ ಎಲ್ಲಾ ರೋಗಿಗಳಿಗೂ ಬಳಸಬಾರದು, ಒಂದು ವೇಳೆ ವ್ಯಾಪಕವಾಗಿ ಎಲ್ಲಾ ರೋಗಿಗಳಿಗೂ ಬಳಸಿದರೆ ಅದು ಕಾನೂನು ಬಾಹಿರ ಹಾಗೂ ಜೀವಕ್ಕೇ ಅಪಾಯ ಎಂದು ಲವ ಅಗರ್ವಾಲ್ ಎಚ್ಚರಿಸಿದ್ದಾರೆ. 

ಕೊರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳ ಪ್ರತಿಕಾಯಗಳನ್ನು ಕೊರೋನಾದಿಂದ ಬಳಲುತ್ತಿರುವ ರೋಗಿಗೆ ವರ್ಗಾವಣೆ ಮಾಡುವುದು ಪ್ಲಾಸ್ಮಾ ಥೆರೆಪಿಯ ಚಿಕಿತ್ಸಾ ವಿಧಾನವಾಗಿದೆ. ಆದರೆ ಈ ರೀತಿ ಮಾಡುವುದರಿಂದ ಪ್ರತಿಕಾಯಗಳನ್ನು ಸ್ವೀಕರಿಸುವ ವ್ಯಕ್ತಿಯ ದೇಹದ ಮೇಲೆ ಅಡ್ಡ ಪರಿಣಾಮಗಳುಂಟಾಗಿ ಅಲರ್ಜಿ ಉಂಟಾಗಬಹುದು. 
 

SCROLL FOR NEXT