ದೇಶ

ಜೀವರಕ್ಷಕ ಔಷಧಿಗಳನ್ನು ಬೆಂಗಳೂರು, ಚೆನ್ನೈಗೆ ಸಾಗಿಸಿದ ಪೊಲೀಸರು: ಸಹಾಯಕ್ಕೆ ಬಂದಿದ್ದು ಟ್ವಿಟ್ಟರ್!

Sumana Upadhyaya

ಚೆನ್ನೈ: ಲಾಕ್ ಡೌನ್ ಸಮಯದಲ್ಲಿ ರಸ್ತೆಗಳಲ್ಲಿ ಪರೋಪಕಾರಿಗಳನ್ನು ಕಾಣುವ ಬದಲು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಪರ್ಕ ಸಿಗುವುದು ಹೆಚ್ಚಾಗಿದೆ. ಇಂತಹ ಒಂದು ಘಟನೆಯೊಂದರಲ್ಲಿ ಚೆನ್ನೈಯ ವ್ಯಕ್ತಿಯೊಬ್ಬರಿಗೆ ಟ್ವಿಟ್ಟರ್ ಮೂಲಕ ಬೆಂಗಳೂರಿನಲ್ಲಿರುವ ಅವರ ಸ್ನೇಹಿತನ ಎರಡು ವರ್ಷದ ಮಗಳಿಗೆ ಜೀವರಕ್ಷಕ ಔಷಧಿ ನೀಡಲು ಸಹಾಯವಾಗಿದೆ.

ನಡೆದಿದ್ದೇನು?: ಚೆನ್ನೈಯ ದೆಬಸಿಸ್ ನಾಯಕ್ ಎಂಬುವವರು ತಮ್ಮ ಸ್ನೇಹಿತನ ಎರಡು ವರ್ಷದ ಮಗಳಿಗೆ ಮೂರ್ಛೆರೋಗಕ್ಕೆ ಸಬ್ರಿಲ್ ಎಂಬ ಔಷಧಿ ಸಿಗದೆ ತೊಂದರೆ ಅನುಭವಿಸುತ್ತಿದ್ದರು. ಈ ಔಷಧಿ ಭಾರತದಲ್ಲಿ ಸಿಗುವುದಿಲ್ಲ. ವಿದೇಶಗಳಲ್ಲಿ ಮಾತ್ರ ಸಿಗುವುದು. ಔಷಧಿ ಮುಗಿದು ಮಗುವಿನ ಆರೋಗ್ಯಕ್ಕೆ ಅಪಾಯ ಬರುವ ಸಾಧ್ಯತೆಯಿತ್ತು.

ಆ ಹೊತ್ತಿಗೆ ದೆಬಸಿಸ್ ಒಡಿಶಾದ ಹಿರಿಯ ಐಎಎಸ್ ಅಧಿಕಾರಿ ಅರುಣ್ ಬೊತ್ರಾ ಅವರನ್ನು ಟ್ವಿಟ್ಟರ್ ನಲ್ಲಿ ಸಂಪರ್ಕಿಸಿದರು. ಅವರು ಈ ಹಿಂದೆ ಇಂತಹದೇ ಕೆಲಸ ಮಾಡಿಕೊಟ್ಟಿದ್ದರು. ಕೂಡಲೇ ಐಎಎಸ್ ಅಧಿಕಾರಿ ಇದನ್ನು ನೋಡಿ ತಮ್ಮ ಸಂಪರ್ಕದಲ್ಲಿದ್ದವರಿಗೆ ಟ್ವೀಟ್ ಮೂಲಕ ಸಂಪರ್ಕಿಸಿ ಯಾರ ಬಳಿ ಔಷಧಿಯಿದೆ ಎಂದು ಟ್ವೀಟ್ ಮಾಡಿ ಕೇಳಿದರು.

ಕೂಡಲೇ ಜನರು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಲಾರಂಭಿಸಿದರು.ಅದರಲ್ಲಿ ಬಂದ ಮೂರು ಟ್ವೀಟ್ ಗಳು ಔಷಧಿ ಸಿಗಲು ಸಹಾಯವಾಯಿತು. ಒಬ್ಬ ವ್ಯಕ್ತಿ ನಗರ್ಕೊಯಿಲ್, ಮತ್ತೊಬ್ಬರು ನೇಪಾಳದಿಂದ ಇನ್ನೊಬ್ಬರು ಬೆಂಗಳೂರಿನಿಂದ ತಮ್ಮಲ್ಲಿ ಔಷಧಿಯಿದೆ ಎಂದು ಹೇಳಿದರು.

ತಮ್ಮ ಮಗಳಿಗೆ ಇದೇ ಔಷಧಿಯನ್ನು ನೀಡುತ್ತಿದ್ದು, ತಮ್ಮ ಬಳಿಯಿದೆ ಎಂದು ಬೆಂಗಳೂರಿನ ಶಂಕರ್ ರಮನ್ ಎಂಬುವವರು ಪ್ರತಿಕ್ರಿಯಿಸಿದರು. ಕೂಡಲೇ ಐಎಎಸ್ ಅಧಿಕಾರಿ ಸಂಪರ್ಕಿಸಿದರು. ಔಷಧಿಯೇನೋ ಸಿಕ್ಕಿತು, ಅದನ್ನು ಸಾಗಾಟ ಮಾಡುವುದು ಹೇಗೆ ಎಂದು ಯೋಚಿಸಿದಾಗ ಟ್ವಿಟ್ಟರ್ ನಲ್ಲಿ ಇದನ್ನು ಗಮನಿಸುತ್ತಿದ್ದ ಬೆಂಗಳೂರು ಡಿಸಿಪಿ ಡಾ ಭೀಮಾಶಂಕರ್ ಗುಳೆದ್ ಅದನ್ನು ಸಾಗಾಟ ಮಾಡುವ ವ್ಯವಸ್ಥೆ ಮಾಡಿದರು.

ಪೊಲೀಸರು ಮಧ್ಯರಾತ್ರಿ 1.30ರ ಹೊತ್ತಿಗೆ ಬೆಂಗಳೂರಿನ ಶಂಕರ್ ರಮನ್ ಅವರ ಮನೆಗೆ ಬಂದು ಔಷಧಿ ಸಂಗ್ರಹಿಸಿದರು. ಬೆಂಗಳೂರಿನ ಮತ್ತೊಬ್ಬ ವ್ಯಕ್ತಿಗೆ ಸಹ ಮಾತ್ರೆಗಳು ಬೇಕಾಗಿದ್ದರಿಂದ ಬೆಂಗಳೂರಿನ ವ್ಯಕ್ತಿಗೆ 20 ಮಾತ್ರೆ, ಚೆನ್ನೈಯಲ್ಲಿರುವ ದೆಬಸಿಸ್ ಅವರಿಗೆ 20 ಮಾತ್ರೆ ಕಳುಹಿಸಿದರು. ಇಲ್ಲಿ ಸಹಾಯಕ್ಕೆ ಬಂದಿದ್ದು ಟ್ವಿಟ್ಟರ್.

SCROLL FOR NEXT